ಖರ್ಗೆ ಅವರ ವಿರುದ್ಧ ಅಸ್ಪೃಶ್ಯತೆ ಆಚರಣೆ: ಅಟ್ರಾಸಿಟಿ ಪ್ರಕರಣಕ್ಕೆ ಆಗ್ರಹ
ಆ.21ರಂದು ರಾಜ್ಯಾದ್ಯಂತ ಡಿಎಸ್‌ಎಸ್ ಪ್ರತಿಭಟನೆ: ಡಾ. ಡಿ.ಜಿ. ಸಾಗರ್

ಕಲಬುರಗಿ, ಆ.14: ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಹಿಂದೂಪರ ಸಂಘಟನೆಯವರು ಶುದ್ಧೀಕರಿಸಿ ಹೋಮ-ಹವನ ನಡೆಸುವ ಮೂಲಕ ಅಸ್ಪೃಶ್ಯತೆ ಆಚರಿಸಿ ಅವರನ್ನು ಅವಮಾನಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸರ್ಕಾರ ಕೂಡಲೇ ದೇಶದ್ರೋಹ ಹಾಗೂ ಅಟ್ರಾಸಿಟಿ ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ. ಡಿ.ಜಿ. ಸಾಗರ್ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಜಾರಿಗೆ ಬಂದು 77 ವರ್ಷಗಳು ಕಳೆದರೂ ದೇಶದಲ್ಲಿ ಅಸ್ಪೃಶ್ಯತೆ ಜೀವಂತವಾಗಿರುವುದಕ್ಕೆ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸಿರುವ ಘಟನೆಯೇ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾತಿ ವ್ಯವಸ್ಥೆಯಲ್ಲಿ ವಂಚಿತ ಸಮುದಾಯದಿಂದ ಬಂದಿರುವ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ರಾಷ್ಟ್ರದ ಪ್ರಮುಖ ನಾಯಕರಾಗಿ ಬೆಳೆದಿದ್ದಾರೆ. ಅವರ ಹಿಂದೆ ಅನೇಕ ವರ್ಷಗಳ ತ್ಯಾಗ, ಹೋರಾಟ ಹಾಗೂ ಪ್ರಾಮಾಣಿಕ ಸೇವೆಯಿದೆ. ಇಂತಹ ಉನ್ನತ ವ್ಯಕ್ತಿತ್ವದ ಮನೋಸ್ಥೈರ್ಯ ಕುಗ್ಗಿಸುವ ಉದ್ದೇಶದಿಂದ ನಡೆದಿರುವ ಕೃತ್ಯವನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಇದು ಕೇವಲ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಡಿರುವ ಅವಮಾನವಲ್ಲ; ಶೋಷಿತ ಸಮುದಾಯಕ್ಕೆ ಮಾಡಿರುವ ಅವಮಾನವಾಗಿದೆ. ಇಂತಹ ದೇಶ ಹಾಗೂ ಸಂವಿಧಾನ ವಿರೋಧಿ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಘಟನೆಯ ಹಿಂದೆ ಇರುವವರ ವಿರುದ್ಧ ದೇಶದ್ರೋಹ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ, 1989ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು.
ತಪ್ಪಿತಸ್ಥರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಡಾ. ಡಿ.ಜಿ. ಸಾಗರ್ ಎಚ್ಚರಿಸಿದರು.
ಈ ಘಟನೆಯನ್ನು ಖಂಡಿಸಿ ಆಗಸ್ಟ್ 21ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಸಂಘಟನೆ ನಿರ್ಧರಿಸಿದೆ. ಸರ್ಕಾರ ಕೂಡಲೇ ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿ.ಸಿ. ವಾಲಿ, ಸುರೇಶ್ ಹಾದಿಮನಿ, ಎಸ್.ಪಿ. ಸುಳ್ಳದ್, ಉಮೇಶ್ ನರೋಣಾ, ಸುರೇಶ್ ಹಾದಿಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



