ಕಾನೂನು

ಅನ್ಯಾಯ ಎದುರಿಸಲು ಕಾನೂನು ಅರಿವು ಅಗತ್ಯ: ಅಟ್ಟೂರ್

ಕಾನೂನು ಸಮಸ್ಯೆ ಎದುರಾದಾಗ ಭಯಪಡದೆ ಸೂಕ್ತ ಮಾರ್ಗದರ್ಶನ ಪಡೆದು ಪರಿಹಾರ ಕಂಡುಕೊಳ್ಳಿ

ಕಲಬುರಗಿ, ಆ.14: ಕಾನೂನು ಅರಿವು ಇದ್ದರೆ ಅನ್ಯಾಯದ ವಿರುದ್ಧ ಧೈರ್ಯವಾಗಿ ನಿಲ್ಲಲು ಸಾಧ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪ್ಯಾನೆಲ್ ನ್ಯಾಯವಾದಿ ಹಣಮಂತರಾಯ ಅಟ್ಟೂರ್ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಆಳಗೂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇರುರ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಹಾಗೂ ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅರ್ಹ ವ್ಯಕ್ತಿಗಳಿಗೆ ಉಚಿತ ಕಾನೂನು ನೆರವು ದೊರೆಯುವ ವ್ಯವಸ್ಥೆ ನಮ್ಮ ದೇಶದಲ್ಲಿದೆ. ಆದ್ದರಿಂದ ಯಾವುದೇ ಕಾನೂನು ಸಮಸ್ಯೆ ಎದುರಾದಾಗ ಭಯಪಡದೆ ಸೂಕ್ತ ಕಾನೂನು ಮಾರ್ಗದರ್ಶನ ಪಡೆದು ಸಮಸ್ಯೆಯನ್ನು ಕಾನೂನುಬದ್ಧವಾಗಿ ಪರಿಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಮೂಲಕ ಗ್ರಾಮದ ಪ್ರತಿಯೊಬ್ಬರಿಗೂ ತಮ್ಮ ಹಕ್ಕುಗಳು ಹಾಗೂ ಕರ್ತವ್ಯಗಳ ಕುರಿತು ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ. ವಿಶೇಷವಾಗಿ ಶಾಲಾ ಮಕ್ಕಳು ಕಾನೂನು ಪಾಲಿಸುವ ಜವಾಬ್ದಾರಿಯುತ ನಾಗರಿಕರಾಗಿ ಬೆಳೆದು, ತಮ್ಮ ಗ್ರಾಮವು ಶಾಂತಿ, ಸಮಾನತೆ ಮತ್ತು ನ್ಯಾಯದ ಆದರ್ಶ ಗ್ರಾಮವಾಗುವಂತೆ ಕೊಡುಗೆ ನೀಡಬೇಕು ಎಂದು ಹೇಳಿದರು.

ಕಾನೂನು ಸೇವಾ ಪ್ರಾಧಿಕಾರಗಳ ವತಿಯಿಂದ ಜನರಲ್ಲಿ ಕಾನೂನು ಅರಿವು ಮೂಡಿಸುವ ನಿಟ್ಟಿನಲ್ಲಿ ಹಲವು ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ. ಜನರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಂಡು, ಅಗತ್ಯ ಸಂದರ್ಭದಲ್ಲಿ ಕಾನೂನು ನೆರವನ್ನು ಪಡೆದುಕೊಳ್ಳಬೇಕು ಎಂದು ಅಟ್ಟೂರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಲಾಲೇ ಪಟೇಲ್, ಯುವ ಮುಖಂಡ ನಾಗೇಶ್ ಪಾಟೀಲ್, ಶಿಕ್ಷಕಿಯರಾದ ಸುಜಾತಾ, ಶಾಂತಾ, ರೇಣುಕಾ, ಸಾಧನಾ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button