ಜಿಲ್ಲಾಸುದ್ದಿ

ಭಾರತ್ ಜೋಡೋ ಯುವ ಸಂಘ ರಚನೆಗೆ ಅರ್ಜಿ ಆಹ್ವಾನ: ಭಾರತಿ ದಂಡೋತಿ

ಚಿತ್ತಾಪುರ ಪುರಸಭೆ ವ್ಯಾಪ್ತಿಯಲ್ಲಿ 7 ಯುವ ಸಂಘಗಳ ಸ್ಥಾಪನೆ; 16ರಿಂದ 35 ವರ್ಷದೊಳಗಿನವರಿಗೆ ಸದಸ್ಯತ್ವ ಅವಕಾಶ

ಚಿತ್ತಾಪುರ, ಆ.14: ಪುರಸಭೆ ವ್ಯಾಪ್ತಿಯಲ್ಲಿ ಸರ್ಕಾರದ ಆದೇಶದಂತೆ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಿ ನೋಂದಾಯಿಸಲು ಆಸಕ್ತ ಯುವಕ, ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ತಿಳಿಸಿದ್ದಾರೆ.

ಪುರಸಭೆ ವ್ಯಾಪ್ತಿಯಲ್ಲಿ ಸರಾಸರಿ 6,000 ಜನಸಂಖ್ಯೆಗೆ ಒಂದರಂತೆ ಒಟ್ಟು 7 ಯುವ ಸಂಘಗಳನ್ನು ಸ್ಥಾಪಿಸಲು ಆದೇಶಿಸಲಾಗಿದೆ. 16ರಿಂದ 35 ವರ್ಷದೊಳಗಿನ ಸ್ಥಳೀಯ ನಿವಾಸಿಗಳು ಈ ಸಂಘಗಳ ಸದಸ್ಯರಾಗಲು ಅರ್ಹರಾಗಿರುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅರ್ಜಿ ಸಲ್ಲಿಸಲು ಬಿಜಿವೈಎಸ್ ಪೋರ್ಟಲ್ ಮೊಬೈಲ್ ಆ್ಯಪ್ ಮೂಲಕ ಅಥವಾ ಸ್ಥಳೀಯ ಕರ್ನಾಟಕ ಒನ್ ಹಾಗೂ ನಾಗರಿಕ ಸೇವಾ ಕೇಂದ್ರಗಳ ಸಹಾಯದಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ನೋಂದಣಿಗಾಗಿ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ಪ್ರತಿ ಸದಸ್ಯರಿಗೆ ₹10 ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಅಥವಾ ಅಡಚಣೆ ಉಂಟಾದಲ್ಲಿ ಪುರಸಭೆ ಕಚೇರಿಗೆ ಭೇಟಿ ನೀಡಿ ಅಗತ್ಯ ಮಾಹಿತಿ ಹಾಗೂ ಸಹಾಯವನ್ನು ಪಡೆದುಕೊಳ್ಳಬಹುದು ಎಂದು ಭಾರತಿ ದಂಡೋತಿ ತಿಳಿಸಿದ್ದಾರೆ.

ಯುವಕರು ಹಾಗೂ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾರತ್ ಜೋಡೋ ಯುವ ಸಂಘಗಳ ಸದಸ್ಯತ್ವ ಪಡೆದುಕೊಂಡು ಸಂಘಟನೆಗಳ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button