ಜಿಲ್ಲಾಸುದ್ದಿ

ಕಲಬುರಗಿಯಲ್ಲಿ ಸ್ವಾತಂತ್ರ್ಯೋತ್ಸವದ ಮುನ್ನ ಮ್ಯಾರಥಾನ್, ಸೈಕ್ಲೋಥಾನ್

ಸ್ವಚ್ಛತೆ ಹಾಗೂ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ನೂರಾರು ಯುವಜನರು, ಅಧಿಕಾರಿಗಳ ಭಾಗಿ

ಕಲಬುರಗಿ, ಆ.14: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ವಚ್ಛತೆ ಹಾಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ಕಲಬುರಗಿ ನಗರದಲ್ಲಿ ಶುಕ್ರವಾರ ಬೆಳಗ್ಗೆ ‘ರನ್ ಫಾರ್ ಶತಾಬ್ದಿಷೇಕಂ’ ಹೆಸರಿನಲ್ಲಿ ಮ್ಯಾರಥಾನ್ ಹಾಗೂ ಸೈಕ್ಲೋಥಾನ್ ಆಯೋಜಿಸಲಾಯಿತು.

ನಗರದ ಐತಿಹಾಸಿಕ ಬಹಮನಿ ಕೋಟೆಯ ಬಳಿಯಲ್ಲಿ ಮಹಾನಗರ ಪಾಲಿಕೆ ಮೇಯರ್ ಶ್ರೀಮತಿ ವರ್ಷಾ ರಾಜೀವ್ ಜಾನೆ ಹಾಗೂ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಮ್ಯಾರಥಾನ್ ಮತ್ತು ಸೈಕ್ಲೋಥಾನ್‌ಗೆ ಚಾಲನೆ ನೀಡಿದರು.

ಬಹಮನಿ ಕೋಟೆಯ ಮುಖ್ಯ ದ್ವಾರದಿಂದ ಆರಂಭವಾದ ಓಟ ಹಾಗೂ ಸೈಕಲ್ ಜಾಥಾವು ಸೂಪರ್ ಮಾರ್ಕೆಟ್, ಜಗತ್ ವೃತ್ತ, ಅನ್ನಪೂರ್ಣ ಕ್ರಾಸ್, ಲಾಹೋಟಿ ಪೆಟ್ರೋಲ್ ಪಂಪ್, ಜಿಲ್ಲಾಧಿಕಾರಿ ಕಚೇರಿ ಎದುರಿನಿಂದ ಸಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಸಮಾರೋಪಗೊಂಡಿತು.

ಮಹಾನಗರ ಪಾಲಿಕೆಯಿಂದ ‘ಸ್ವಚ್ಛ ಭಾರತ ಮಿಷನ್ 2.0’ ಅಡಿಯಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ನೂರಾರು ಯುವಕರು, ಯುವತಿಯರು, ಅಧಿಕಾರಿಗಳು ಹಾಗೂ ಗಣ್ಯರು ಭಾಗವಹಿಸಿ ಸ್ವಚ್ಛತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಂಕನೂರ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ನಳಿನ್ ಅತುಲ್, ಉಪವಿಭಾಗಾಧಿಕಾರಿ ಸಾಹಿತ್ಯ ಆಲದಕಟ್ಟಿ, ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ನಗರ ಪೊಲೀಸ್ ಉಪ ಆಯುಕ್ತೆ ಶ್ರೀಮತಿ ಶಾಲು ಸೇರಿದಂತೆ ಹಲವರು ಸೈಕ್ಲೋಥಾನ್‌ನಲ್ಲಿ ಪಾಲ್ಗೊಂಡರು.

ಮಹಾಪೌರರಾದ ಶ್ರೀಮತಿ ವರ್ಷಾ ಜಾನೆ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ, ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ, ಉಪವಿಭಾಗಾಧಿಕಾರಿ ಸಾಹಿತ್ಯ ಆಲದಕಟ್ಟಿ, ಡಿಸಿಪಿ ಆಶಿಷ್ ರೆಡ್ಡಿ ಸೇರಿದಂತೆ ಹಲವರು ಓಟದ ಮೂಲಕ ಮ್ಯಾರಥಾನ್‌ನಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಈ ಮ್ಯಾರಥಾನ್ ಹಾಗೂ ಸೈಕ್ಲೋಥಾನ್ ಮೂಲಕ ಸ್ವಚ್ಛತೆ, ಆರೋಗ್ಯಕರ ಜೀವನಶೈಲಿ ಮತ್ತು ಸಾರ್ವಜನಿಕರಲ್ಲಿ ನಾಗರಿಕ ಜವಾಬ್ದಾರಿಯ ಕುರಿತು ಜಾಗೃತಿ ಮೂಡಿಸುವ ಸಂದೇಶ ನೀಡಲಾಯಿತು.

Related Articles

Leave a Reply

Your email address will not be published. Required fields are marked *

Back to top button