ನಾಗಪಂಚಮಿಗೆ ಹುತಿಗೆ ಹಾಲು ಎರೆಯುವುದು ಶ್ರೇಷ್ಠ
ಬಸವ ಪಂಚಮಿ ಹೆಸರಿನಲ್ಲಿ ವಿರೋಧಿಸಬೇಡಿ: ಬಸವಾಮೃತ ಗೋರಕ್ಷ ಶರಣರು

ಕಲಬುರಗಿ, ಆ.14: ನಾಗರಪಂಚಮಿ ದಿನ ಹುತಿಗೆ ಹಾಲು ಎರೆಯುವುದು ಅತ್ಯಂತ ಶ್ರೇಷ್ಠ ಹಾಗೂ ಪವಿತ್ರ ಆಚರಣೆಯಾಗಿದ್ದು, ಬಸವ ಪಂಚಮಿ ಹೆಸರಿನಲ್ಲಿ ಈ ಆಚರಣೆಯನ್ನು ವಿರೋಧಿಸಬಾರದು ಎಂದು ಬಸವಾಮೃತ ಗೋರಕ್ಷ ಶರಣರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗರಪಂಚಮಿ ದಿನ ಹುತಿಗೆ ಹಾಲು ಎರೆಯುವ ಪದ್ಧತಿ ಸಹಸ್ರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪವಿತ್ರ ಆಚರಣೆಯಾಗಿದೆ. ಭಾರತದಲ್ಲಿ ಹಬ್ಬಗಳ ಆರಂಭವೂ ನಾಗರಪಂಚಮಿಯಿಂದಲೇ ಆಗುತ್ತದೆ. ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ನಾಗರಪಂಚಮಿ ಸಂದರ್ಭದಲ್ಲಿ ಗಲ್ಲಿ ಗಲ್ಲಿಗಳಲ್ಲಿ ಜಿದ್ದಾಜಿದ್ದಿನ ಆಟಗಳು ನಡೆಯುತ್ತವೆ ಎಂದು ತಿಳಿಸಿದರು.
ತೆಂಗಿನಕಾಯಿ ಆಟ, ನಿಂಬೆ ಹಣ್ಣಿನ ಆಟ ಸೇರಿದಂತೆ ಹಲವು ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಗಳು ನಾಗರಪಂಚಮಿಯ ವಿಶೇಷತೆಯಾಗಿವೆ. ಆಟದಲ್ಲಿ ಗೆದ್ದವರಿಗೆ ಉಡುಗೊರೆ, ಬೊಬ್ಬರಿ ಗುಂಡುಗಳು ಹಾಗೂ ಬೆಲ್ಲ ನೀಡುವ ಸಂಪ್ರದಾಯವಿದೆ. ವಿಶೇಷವಾಗಿ ತಾಯಂದಿರಿಗೆ ನಾಗರಪಂಚಮಿ ಸ್ವರ್ಗ ಧರೆಗಿಳಿದಷ್ಟು ಸಂತೋಷ ನೀಡುತ್ತದೆ ಎಂದು ಅವರು ಹೇಳಿದರು.
ಹೊಸದಾಗಿ ಮದುವೆಯಾದ ಮಹಿಳೆಯರು ನಾಗರಪಂಚಮಿ ಸಂದರ್ಭದಲ್ಲಿ ತವರು ಮನೆಗೆ ತೆರಳಿ ಗೆಳತಿಯರೊಂದಿಗೆ ಸೇರಿ ಹೊಸ ಸೀರೆ ತೊಟ್ಟು, ಸಾಂಪ್ರದಾಯಿಕ ಆಟಗಳಲ್ಲಿ ಪಾಲ್ಗೊಳ್ಳುತ್ತಾರೆ. ಅಣ್ಣನ ಆಗಮನದ ನಿರೀಕ್ಷೆಯಲ್ಲಿರುವ ಸಹೋದರಿಯರು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಹುತಿಗೆ ಹಾಲು ತೆಗೆದುಕೊಂಡು ಹೋಗಿ ಎರೆಯುವ ಸಂಭ್ರಮವನ್ನು ಮಾತಿನಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದರು.
ನಾಗರಪಂಚಮಿ ಆಚರಣೆಯನ್ನು ನಮ್ಮ ಹಿರಿಯರು ಯಾವುದೇ ಮೂಢನಂಬಿಕೆಗಾಗಿ ರೂಪಿಸಿಲ್ಲ. ಆಷಾಢ ಮಾಸ ಮುಕ್ತಾಯಗೊಂಡು ಶ್ರಾವಣ ಮಾಸ ಆರಂಭವಾಗುವ ಸಂದರ್ಭದಲ್ಲಿ ನಾಗರಪಂಚಮಿ ಬರುತ್ತದೆ. ಹುತಿಗೆ ಹಾಲು ಎರೆಯುವ ಆಚರಣೆಯ ಹಿಂದೆ ಪರಿಸರ ಹಾಗೂ ಕೃಷಿಗೆ ಸಂಬಂಧಿಸಿದ ವೈಜ್ಞಾನಿಕ ಕಾರಣವೂ ಇದೆ ಎಂದು ಬಸವಾಮೃತ ಗೋರಕ್ಷ ಶರಣರು ವಿವರಿಸಿದರು.
ಆಷಾಢದಲ್ಲಿ ಸುರಿದ ಮಳೆಯಿಂದ ಭೂಮಿಯಲ್ಲಿ ಗಟ್ಟಿಯಾದ ಪದಾರ್ಥಗಳು ಮೃದುವಾಗುತ್ತವೆ. ಮಣ್ಣಿನ ಫಲವತ್ತತೆ ಹೆಚ್ಚುವುದರ ಜೊತೆಗೆ ಅಂತರ್ಜಲ ಮಟ್ಟವೂ ಏರಿಕೆಯಾಗುತ್ತದೆ. ಈ ಕಾರಣದಿಂದಲೇ ಹಿಂದಿನ ಕಾಲದ ಸುಜ್ಞಾನವನ್ನು ಇಂದಿನ ಕಾಲದ ವಿಜ್ಞಾನವೆಂದು ಪರಿಗಣಿಸಬಹುದು ಎಂದು ಹೇಳಿದರು.
ಶ್ರಾವಣ ಮಾಸದಲ್ಲಿ ಶಿವನಿಗೆ ಕ್ಷೀರಾಭಿಷೇಕ ಮಾಡುವ ಸಂಪ್ರದಾಯವೂ ಇದೆ. ಶ್ರಾವಣದಲ್ಲಿ ಹಾಲು ಸೇವಿಸಬಾರದು ಎಂಬ ಆಚರಣೆಯ ಹಿಂದೆ ಆರೋಗ್ಯದ ಕಾರಣವಿದೆ. ಆಷಾಢದಲ್ಲಿ ಬೆಳೆದ ಹುಲ್ಲಿನಲ್ಲಿ ಕ್ರಿಮಿ-ಕೀಟಗಳು ಇರಬಹುದಾಗಿದ್ದು, ಅವುಗಳನ್ನು ಸೇವಿಸುವ ಜಾನುವಾರುಗಳ ಹಾಲಿನಲ್ಲಿ ಬದಲಾವಣೆ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಶ್ರಾವಣ ಮಾಸದಲ್ಲಿ ಹಾಲನ್ನು ಸೇವಿಸುವ ಬದಲು ಶಿವಲಿಂಗಕ್ಕೆ ಅಭಿಷೇಕ ಮಾಡಬೇಕು ಎಂಬ ಸಂಪ್ರದಾಯ ರೂಪುಗೊಂಡಿದೆ ಎಂದು ಅವರು ತಿಳಿಸಿದರು.
ಅಭಿಷೇಕ ಮಾಡಿದ ಹಾಲು ಶಿವಲಿಂಗದ ಮೂಲಕ ಭೂಮಿಗೆ ಸೇರುವಂತೆ ವ್ಯವಸ್ಥೆ ಮಾಡಿರುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಲು ಸಹಕಾರಿಯಾಗುತ್ತದೆ. ಇದರಿಂದ ಆರೋಗ್ಯಕರ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಹೀಗಾಗಿ ನಾಗರಪಂಚಮಿ ಸೇರಿದಂತೆ ಶ್ರಾವಣ ಮಾಸದ ಆಚರಣೆಗಳ ಹಿಂದೆ ವೈಜ್ಞಾನಿಕ ಅಂಶಗಳೂ ಅಡಗಿವೆ ಎಂದು ಅವರು ಹೇಳಿದರು.
ಈ ಬಾರಿ ನಾಗರಪಂಚಮಿ ಹಿನ್ನೆಲೆಯಲ್ಲಿ ಕಾವೇರಿ ನಗರ, ಅಯ್ಯರ್‌ವಾಡಿ, ಡಿಜಿ ಲೇಔಟ್, ಸಾಯಿ ಮಂದಿರ ಸೇರಿದಂತೆ ವಿವಿಧೆಡೆ ಹುತಿಗೆ ಹಾಲು ಎರೆಯುವ ಮೂಲಕ ಜಾಗೃತಿ ಮೂಡಿಸಲಾಗುವುದು. ಇಂತಹ ಪವಿತ್ರ ಆಚರಣೆಯನ್ನು ಬಸವ ಪಂಚಮಿ ಹೆಸರಿನಲ್ಲಿ ವಿರೋಧಿಸಬಾರದು ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಹಾದೇವಿ ಪಾಟೀಲ್, ವಿಜಯಲಕ್ಷ್ಮೀ ಸಿಂಗೋಡಿ, ಶಿವಲೀಲಾ ಹಿರೇಮಠ, ಪ್ರಭಾವತಿ, ದೀಪಕ್ ಪವಾರ್, ಶಶಿಕಾಂತ ಆರ್. ದೀಕ್ಷಿತ್, ರೇಣುಕಾ ಹಿರೇಮಠ, ಸಂತೋಷ ಛತ್ರಬಂಧ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



