ಕಲಬುರಗಿಯಲ್ಲಿ ನುಸುಳುಕೋರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶ್ರೀರಾಮ ಸೇನಾ ಪ್ರತಿಭಟನೆ
ಅಕ್ರಮ ಕಸಾಯಿಖಾನೆ ಸೀಜ್ ಮಾಡಿ, ಅಕ್ರಮವಾಗಿ ವಾಸಿಸುತ್ತಿರುವ ಬಾಂಗ್ಲಾ ಪ್ರಜೆಗಳ ಪತ್ತೆಗೆ ಆಗ್ರಹ

ಕಲಬುರಗಿ, ಆ.14: ನಗರದ ತಾವರಗೇರಾ ಕ್ರಾಸ್ ಸಮೀಪದ ಅಕ್ರಮ ಕಸಾಯಿಖಾನೆಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಪಾಕಿಸ್ತಾನದವರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಬಾಂಗ್ಲಾದೇಶದ ನುಸುಳುಕೋರರನ್ನು ಪತ್ತೆಹಚ್ಚಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನಾ ಕಾರ್ಯಕರ್ತರು ಶುಕ್ರವಾರ ನಗರ ಪೊಲೀಸ್ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ನಗರದ ಅಕ್ರಮ ಕಸಾಯಿಖಾನೆಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಪಾಕಿಸ್ತಾನದವರೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ದೊರೆತಿದೆ. ಈ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸಿ, ಸತ್ಯಾಸತ್ಯತೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ನಗರದಲ್ಲಿ ಹಲವು ದಿನಗಳಿಂದ ಅಕ್ರಮ ಕಸಾಯಿಖಾನೆ ನಡೆಸುತ್ತಿರುವುದನ್ನು ಪತ್ತೆಹಚ್ಚಿರುವುದು ಸ್ವಾಗತಾರ್ಹ. ಕಸಾಯಿಖಾನೆಯ ಮಾಲೀಕರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ, ತಕ್ಷಣವೇ ಅಕ್ರಮ ಕಸಾಯಿಖಾನೆಯನ್ನು ಸೀಜ್ ಮಾಡಬೇಕು ಎಂದು ಆಗ್ರಹಿಸಿದರು.
ನಗರದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಬಾಂಗ್ಲಾದೇಶದ ಪ್ರಜೆಗಳನ್ನು ಪತ್ತೆಹಚ್ಚಿ, ಅವರ ದಾಖಲೆಗಳನ್ನು ಪರಿಶೀಲಿಸಿ, ಕಾನೂನುಬಾಹಿರವಾಗಿ ನೆಲೆಸಿರುವವರು ಕಂಡುಬಂದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ನಗರದ ಕಪನೂರು ಕೈಗಾರಿಕಾ ಪ್ರದೇಶ, ನಂದೂರು ಕೈಗಾರಿಕಾ ಪ್ರದೇಶ ಹಾಗೂ ಕೇಂದ್ರ ಬಸ್ ನಿಲ್ದಾಣದ ಎದುರಿನ ಶಾಂತಿನಗರದಲ್ಲಿ ಬ್ಲೌಸ್ ಡಿಸೈನ್ ಮಾಡುವ ವೃತ್ತಿಯಲ್ಲಿ ನುಸುಳುಕೋರರು ಇದ್ದಾರೆ ಎಂಬ ಆರೋಪಗಳ ಕುರಿತು ಕೂಡ ಪೊಲೀಸರು ಪರಿಶೀಲನೆ ನಡೆಸಬೇಕು. ಇಂತಹವರ ಗುರುತು ಹಾಗೂ ದಾಖಲೆಗಳನ್ನು ಪರಿಶೀಲಿಸಿ, ಕಾನೂನು ಉಲ್ಲಂಘನೆ ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶಿವಕುಮಾರ್ ಸಾಗರ್, ರಾಜು ವಾಘಮೋರೆ, ಪ್ರಶಾಂತ್ ಸಿರೂರ್, ಅಂಕುಶ ಭೋಸಲೆ, ಉದಯ ಸುಲ್ತಾನಪುರ, ವೀರೇಶ್ ಭಿಂಗೆ, ಶರಣು ಶಿರೂರ್, ಸಂಗಮೇಶ್ ಕೋಳಕೂರ್ ಸೇರಿದಂತೆ ಶ್ರೀರಾಮ ಸೇನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರತಿಭಟನೆಯ ಬಳಿಕ ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿ, ಅಕ್ರಮ ಕಸಾಯಿಖಾನೆ ಹಾಗೂ ಆರೋಪಿತ ವ್ಯಕ್ತಿಯ ಸಂಪರ್ಕಗಳ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.



