ಡಾ. ಅಜಯಸಿಂಗ್‌ಗೆ ಕೃಷಿ ಖಾತೆ ನೀಡುವಂತೆ ನರಿಬೋಳ್ ಬೇಡಿಕೆ
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪೂರಕವಾದ ಖಾತೆ ವಹಿಸಿಕೊಡಲಿ: ಎಂ.ಎಸ್. ಪಾಟೀಲ ನರಿಬೋಳ್

ಕಲಬುರಗಿ, ಆ.9: ನಿರಂತರವಾಗಿ ವನವಾಸ ಅನುಭವಿಸಿದ ಬಳಿಕ ಸಚಿವ ಸ್ಥಾನ ದೊರೆತಿರುವ ಜೇವರ್ಗಿ ಕ್ಷೇತ್ರದ ಶಾಸಕ ಡಾ. ಅಜಯಸಿಂಗ್ ಅವರಿಗೆ ಕೃಷಿ ಖಾತೆಯಂತಹ ಮಹತ್ವದ ಖಾತೆಯನ್ನು ನೀಡಬೇಕು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ ನರಿಬೋಳ್ ಅವರು ಒತ್ತಾಯಿಸಿದ್ದಾರೆ.
ಈ ಭಾಗದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವ ಕುಟುಂಬಗಳಲ್ಲಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಕುಟುಂಬವೂ ಒಂದಾಗಿದೆ. ಡಾ. ಅಜಯಸಿಂಗ್ ಅವರು ಸಾಮಾನ್ಯ ರಾಜಕಾರಣಿಯಲ್ಲ. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುತ್ರರಾಗಿ, ಜೇವರ್ಗಿ ಕ್ಷೇತ್ರದ ಶಾಸಕರಾಗಿ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಈ ಭಾಗಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ ಎಂದು ನರಿಬೋಳ್ ಅವರು ಶ್ಲಾಘಿಸಿದ್ದಾರೆ.
ತಾಂತ್ರಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಹಿರಿಮೆ ಮತ್ತು ಗೌರವ ಹೊಂದಿರುವ ಡಾ. ಅಜಯಸಿಂಗ್ ಅವರು ಇತರ ರಾಜಕಾರಣಿಗಳಿಗೆ ಹೋಲಿಸಿದರೆ ಪ್ರಸಕ್ತ ವಿದ್ಯಮಾನಗಳ ಸಂಪೂರ್ಣ ಮಾಹಿತಿಯನ್ನು ಹೊಂದಿದ್ದಾರೆ. ಯುವಜನತೆಯ ಪ್ರೀತಿಗೂ ಪಾತ್ರರಾಗಿದ್ದಾರೆ. ಹಲವು ವರ್ಷಗಳಿಂದ ಸಚಿವ ಸ್ಥಾನ ದೊರೆಯುವ ನಿರೀಕ್ಷೆಯಲ್ಲಿಯೇ ಕಾಂಗ್ರೆಸ್ ಪಕ್ಷಕ್ಕಾಗಿ ಶ್ರಮಿಸಿದ್ದಾರೆ. ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಹೈಕಮಾಂಡ್ ಅವರ ಮೂಲಕ ಸಚಿವ ಸ್ಥಾನ ದೊರೆತಿರುವುದು ಸಂತಸದ ಸಂಗತಿ ಎಂದು ಅವರು ತಿಳಿಸಿದ್ದಾರೆ.
ಆದರೆ ಡಾ. ಅಜಯಸಿಂಗ್ ಅವರ ಸೇವೆ, ಅನುಭವ, ಘನತೆ ಹಾಗೂ ಪರಿಣತಿಗೆ ಅನುಗುಣವಾಗಿ ಖಾತೆ ನೀಡಬೇಕಾಗಿದೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯಲಿದೆ ಎಂದು ನರಿಬೋಳ್ ಅಭಿಪ್ರಾಯಪಟ್ಟಿದ್ದಾರೆ.
ನಾಮಕಾವಾಸ್ತೆ ಸಚಿವ ಸ್ಥಾನ ನೀಡುವುದಕ್ಕಿಂತ ಕಲ್ಯಾಣ ಕರ್ನಾಟಕದ ಹಿತಾಸಕ್ತಿಗೆ ಪೂರಕವಾಗುವ ಜವಾಬ್ದಾರಿಯುತ ಖಾತೆಯನ್ನು ನೀಡಬೇಕು. ಅದರಲ್ಲೂ ಕೃಷಿ ಖಾತೆಯನ್ನು ನೀಡಿದರೆ ಈ ಭಾಗದ ರೈತರು ಹಾಗೂ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗಲಿದೆ. ಕಲ್ಯಾಣ ಕರ್ನಾಟಕದ ಜನರ ಆಶೋತ್ತರಗಳಿಗೆ ಸ್ಪಂದಿಸುವ ರೀತಿಯಲ್ಲಿ ಡಾ. ಅಜಯಸಿಂಗ್ ಅವರಿಗೆ ಸೂಕ್ತ ಖಾತೆ ನೀಡಿ ನ್ಯಾಯ ಒದಗಿಸಬೇಕು ಎಂದು ಎಂ.ಎಸ್. ಪಾಟೀಲ ನರಿಬೋಳ್ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.



