ಕಲ್ಯಾಣ ಕರ್ನಾಟಕ

ಪಿಯುಸಿ ಪರೀಕ್ಷಾ ಶುಲ್ಕ ಹೆಚ್ಚಳಕ್ಕೆ ಎಐಡಿಎಸ್‌ಒ ಖಂಡನೆ

ಕಲಬುರಗಿ, ಸೆ.21: ರಾಜ್ಯದಲ್ಲಿ ಪದವಿ ಪೂರ್ವ (ಪಿಯು) ಕೋರ್ಸ್‌ಗಳ ಪರೀಕ್ಷಾ ಶುಲ್ಕವನ್ನು ಏಕಾಏಕಿ ಶೇ.50ರಷ್ಟು ಹೆಚ್ಚಿಸಿ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿರುವುದನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (ಎಐಡಿಎಸ್‌ಒ) ಖಂಡಿಸಿದೆ.

ಎಐಡಿಎಸ್‌ಒ ಜಿಲ್ಲಾ ಕೌನ್ಸಿಲ್ ಕಾರ್ಯದರ್ಶಿ ವೆಂಕಟೇಶ ದೇವದುರ್ಗ ಮಾತನಾಡಿ, ಈಗಾಗಲೇ ಬರಗಾಲದಿಂದ ಕಂಗಾಲಾಗಿರುವ ರೈತರು ಹಾಗೂ ಕೃಷಿ ಕೂಲಿಕಾರರ ಕುಟುಂಬಗಳ ಮೇಲೆ ಸರ್ಕಾರ ಶುಲ್ಕ ಏರಿಕೆಯ ಹೊರೆ ಹೊರಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಜನಸಾಮಾನ್ಯರು ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಶಿಕ್ಷಣದ ಕನಸಿಗೆ ರಾಜ್ಯ ಸರ್ಕಾರ ತಣ್ಣೀರು ಎರಚುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ದೇಶದ ಮಹಾನ್ ವ್ಯಕ್ತಿಗಳ ಆಶಯದಂತೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಉಚಿತ ಶಿಕ್ಷಣ ನೀಡುವುದು ಸರ್ಕಾರದ ಆದ್ಯ ಕರ್ತವ್ಯ. ಆದರೆ ಶಿಕ್ಷಣವನ್ನು ಉತ್ತೇಜಿಸುವ ಬದಲು ಪರೀಕ್ಷಾ ನೋಂದಣಿ, ಪ್ರಾಯೋಗಿಕ ಪರೀಕ್ಷೆ, ಅಂಕಪಟ್ಟಿ, ಮರುಮೌಲ್ಯಮಾಪನ ಸೇರಿದಂತೆ ವಿವಿಧ ಶುಲ್ಕಗಳನ್ನು ಗಣನೀಯವಾಗಿ ಹೆಚ್ಚಿಸಿರುವುದು ಸರ್ಕಾರದ ಶಿಕ್ಷಣ ವಿರೋಧಿ ನೀತಿಯನ್ನು ತೋರಿಸುತ್ತದೆ ಎಂದು ಹೇಳಿದರು.

2026-27ನೇ ಶೈಕ್ಷಣಿಕ ಸಾಲಿನಿಂದ ವಿವಿಧ ಪರೀಕ್ಷಾ ಶುಲ್ಕಗಳನ್ನು ಹೆಚ್ಚಿಸಲಾಗಿದ್ದು, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ₹400ರಿಂದ ₹600ಕ್ಕೆ ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದರು.

ಪ್ರತಿ ವಿಷಯದ ಪರೀಕ್ಷಾ ಶುಲ್ಕವನ್ನು ₹140ರಿಂದ ₹210ಕ್ಕೆ, ಎರಡು ವಿಷಯಗಳಿಗೆ ₹270ರಿಂದ ₹405ಕ್ಕೆ ಹಾಗೂ ಮೂರು ಅಥವಾ ಅದಕ್ಕಿಂತ ಹೆಚ್ಚಿನ ವಿಷಯಗಳಿಗೆ ₹400ರಿಂದ ₹600ಕ್ಕೆ ಹೆಚ್ಚಿಸಲಾಗಿದೆ. ದಂಡ ಶುಲ್ಕವನ್ನು ₹1,320ರಿಂದ ₹1,980ಕ್ಕೆ ಏರಿಸಲಾಗಿದೆ ಎಂದು ವಿವರಿಸಿದರು.

ಅದೇ ರೀತಿ ಪ್ರಾಯೋಗಿಕ ಪರೀಕ್ಷೆಯ ಪ್ರತಿ ವಿಷಯದ ಶುಲ್ಕವನ್ನು ₹110ರಿಂದ ₹165ಕ್ಕೆ, ಅಂಕಪಟ್ಟಿ ಶುಲ್ಕವನ್ನು ₹50ರಿಂದ ₹75ಕ್ಕೆ ಹಾಗೂ ಪರೀಕ್ಷಾ ಕೇಂದ್ರ ಬದಲಾವಣೆಯ ಶುಲ್ಕವನ್ನು ₹2,000ರಿಂದ ₹3,000ಕ್ಕೆ ಹೆಚ್ಚಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಂಕಪಟ್ಟಿಯ ದ್ವಿತೀಯ ಪ್ರತಿಯ ಶುಲ್ಕವನ್ನು ₹1,600ರಿಂದ ₹2,400ಕ್ಕೆ, ತೃತೀಯ ಪ್ರತಿಯ ಶುಲ್ಕವನ್ನು ₹3,170ರಿಂದ ₹4,755ಕ್ಕೆ ಹಾಗೂ ತತ್ಕಾಲ್ ಅಂಕಪಟ್ಟಿ ಪಡೆಯುವ ಶುಲ್ಕವನ್ನು ₹7,920ರಿಂದ ₹11,880ಕ್ಕೆ ಹೆಚ್ಚಿಸಲಾಗಿದೆ. ದ್ವಿತೀಯ ಪಿಯುಸಿ ಅಂಕಪಟ್ಟಿ ಪರಿಶೀಲನೆಗೆ ಹೊಸದಾಗಿ ₹2,000 ಶುಲ್ಕ ನಿಗದಿಪಡಿಸಲಾಗಿದೆ. ಪರೀಕ್ಷಾ ಅಂಕಗಳ ಸುಧಾರಣೆಗೆ ಪಾವತಿಸಬೇಕಾದ ಶುಲ್ಕವನ್ನು ₹262ರಿಂದ ₹525ಕ್ಕೆ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.

ಈ ದುಬಾರಿ ಶುಲ್ಕ ಹೆಚ್ಚಳದಿಂದ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವ ಅಪಾಯವಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ವಿದ್ಯಾರ್ಥಿ ವಿರೋಧಿ ಆದೇಶವನ್ನು ಹಿಂಪಡೆದು, ಪರೀಕ್ಷಾ ಶುಲ್ಕ ಹೆಚ್ಚಳವನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ವೆಂಕಟೇಶ ದೇವದುರ್ಗ ಆಗ್ರಹಿಸಿದರು.

Related Articles

Leave a Reply

Your email address will not be published. Required fields are marked *

Back to top button