ಕ್ರೀಡೆ

ಕೆಎಸ್‌ಸಿಎ ರಾಯಚೂರು ವಲಯ ಸಭೆ: ಪ್ರತಿಭಾವಂತ ಕ್ರಿಕೆಟಿಗರಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ಒತ್ತು

ಗ್ರಾಮೀಣ ಹಾಗೂ ಜಿಲ್ಲಾ ಮಟ್ಟದ ಆಟಗಾರರಿಗೆ ವೇದಿಕೆ; ಶೀಘ್ರದಲ್ಲೇ ವಯೋಮಿತಿ ಕ್ರಿಕೆಟ್ ಟೂರ್ನಿ ಆಯೋಜನೆ

ಬೀದರ್, ಜು.20: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ರಾಯಚೂರು ವಲಯದ ವತಿಯಿಂದ ಐಎಂ ಮತ್ತು ಎಎ ಕ್ಲಬ್‌ಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳ ಸಭೆ ನಗರದ ಹೋಟೆಲ್ ಕೃಷ್ಣ ರೀಜೆನ್ಸಿಯಲ್ಲಿ ಭಾನುವಾರ ನಡೆಯಿತು.

ಸಭೆಯನ್ನು ಉದ್ದೇಶಿಸಿ ಕೆಎಸ್‌ಸಿಎ ರಾಯಚೂರು ವಲಯದ ಸಂಚಾಲಕ ಕುಶಾಲ ಪಾಟೀಲ ಗಾದಗಿ ಮಾತನಾಡಿ, ಕ್ರಿಕೆಟ್ ಕೇವಲ ಬೆಂಗಳೂರು ಮತ್ತು ಮೈಸೂರಿನಂತಹ ಮಹಾನಗರಗಳಿಗೆ ಮಾತ್ರ ಸೀಮಿತ ಎಂಬ ಕಲ್ಪನೆ ತಪ್ಪಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ಅಪಾರ ಪ್ರತಿಭೆಗಳಿದ್ದು, ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ನೀಡಿದರೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಉತ್ತಮ ಅವಕಾಶಗಳಿವೆ ಎಂದು ಹೇಳಿದರು.

19 ಹಾಗೂ 23 ವರ್ಷದೊಳಗಿನ ಆಟಗಾರರ ತಂಡಗಳ ಆಯ್ಕೆ ಪ್ರಕ್ರಿಯೆ ಮತ್ತು ಅಂತರ್‌ಜಿಲ್ಲಾ ಕ್ರಿಕೆಟ್ ಪಂದ್ಯಾವಳಿಯನ್ನು ಶೀಘ್ರದಲ್ಲೇ ಆಯೋಜಿಸಲಾಗುವುದು. ಆಯಾ ಜಿಲ್ಲೆಗಳಲ್ಲಿಯೇ ಪಂದ್ಯಾವಳಿಗಳನ್ನು ನಡೆಸುವ ಮೂಲಕ ಗ್ರಾಮೀಣ ಮತ್ತು ಜಿಲ್ಲಾ ಮಟ್ಟದ ಪ್ರತಿಭಾವಂತ ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಕೆಎಸ್‌ಸಿಎ ರಾಯಚೂರು ವಲಯದ ಅಧ್ಯಕ್ಷ ಚಂದ್ರಶೇಖರ್ ಮೈಲಾರ್ ಹಾಗೂ ಸಂಯೋಜಕ ರಾಜೇಶ್ ಪಾಟೀಲ ಮಾತನಾಡಿ, ವಲಯದಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಎಲ್ಲಾ ಕ್ಲಬ್‌ಗಳು ಮತ್ತು ಪದಾಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಬೀದರ್‌ನ ಸಂಜಯ ಜಾಧವ್, ಕಲಬುರಗಿಯ ಪ್ರಕಾಶ ಅಯ್ಯಳಕರ, ಬಾಗಲಕೋಟೆಯ ರವಿ ಎಸ್. ಮಗದುಮ್, ಯಾದಗಿರಿಯ ರುಕ್ಮಣ ಆರ್. ಮಡಿವಾಳ, ವಿಜಯಪುರದ ಪುಂಡಲೀಕ ವಾರಣಾಸಿ, ರಾಯಚೂರಿನ ವಿನಾಯಕರಾವ್ ಹಾಗೂ ಕೊಪ್ಪಳದ ರಾಜೇಶ್ ಪಲ್ಲಕ್ಕಿ ಅವರನ್ನು ಜಿಲ್ಲಾ ಸಂಯೋಜಕರಾಗಿ ನೇಮಕ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಆಯ್ಕೆ, ಹಣಕಾಸು, ನೇಮಕಾತಿ, ತರಬೇತುದಾರರು, ತೀರ್ಪುಗಾರರು, ಅಂತರ್‌ಶಾಲಾ–ಕಾಲೇಜು, ಮಹಿಳಾ, ಲೈಂಗಿಕ ಕಿರುಕುಳ ತಡೆ, ಪಂದ್ಯಾವಳಿ ಹಾಗೂ ಮೂಲಸೌಕರ್ಯ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಅನೀಲಕುಮಾರ ದೇಶಮುಖ ಅವರನ್ನು ಕೆಎಸ್‌ಸಿಎ ರಾಯಚೂರು ವಲಯದ ಮಾಧ್ಯಮ ಸಂಯೋಜಕರಾಗಿ ಸರ್ವಾನುಮತದಿಂದ ನೇಮಕ ಮಾಡಲಾಯಿತು. ಸಭೆಯಲ್ಲಿ ಐಎಂ ಮತ್ತು ಎಎ ಕ್ಲಬ್‌ಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ವಿವಿಧ ಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button