ಕಲೆಸಾಂಸ್ಕೃತಿಕ

ಕಲಬುರಗಿಯಲ್ಲಿ ಆಗಸ್ಟ್ 8ರಿಂದ ಕಲಾವಿದ ಸುರೇಶ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

ಆಗಸ್ಟ್ 8ರಿಂದ 12ರವರೆಗೆ ಬಿಸಿಲು ಆರ್ಟ್ ಗ್ಯಾಲರಿಯಲ್ಲಿ ಅಪರೂಪದ ಕಲಾಕೃತಿಗಳ ಪ್ರದರ್ಶನ; ಸಾರ್ವಜನಿಕರಿಗೆ ಉಚಿತ ಪ್ರವೇಶ

ಕಲಬುರಗಿ, ಆ.5: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದಡಿ ಯುವ ಚಿತ್ರಕಲಾವಿದ ಸುರೇಶ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಆಗಸ್ಟ್ 8ರಿಂದ 12ರವರೆಗೆ ನಗರದ ರಾಮಮಂದಿರದ ಹಿಂಭಾಗದಲ್ಲಿರುವ ಬಿಸಿಲು ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಲಾಗಿದೆ ಎಂದು ದೃಶ್ಯಕಲಾ ಸಂಸ್ಥೆಯ ಅಧ್ಯಕ್ಷ ಡಾ. ಪರಶುರಾಮ್ ಪಿ. ತಿಳಿಸಿದ್ದಾರೆ.

ಪ್ರದರ್ಶನವನ್ನು ಆಗಸ್ಟ್ 8ರಂದು ಸಂಜೆ 5 ಗಂಟೆಗೆ ದಕ್ಷಿಣ ಮತಕ್ಷೇತ್ರದ ಮಾಜಿ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ಉದ್ಘಾಟಿಸಲಿದ್ದಾರೆ. ಚಿತ್ರಕಲಾವಿದ ಸುರೇಶ್ ಅವರ ಕಲಾಕೃತಿಗಳನ್ನು ಚಿತ್ರಕಲಾವಿದ ಸೂರ್ಯಕಾಂತ ನಂದೂರು ಪರಿಚಯಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಹಿರಿಯ ಚಿತ್ರ-ಶಿಲ್ಪಕಲಾವಿದ ಬಾಬುರಾವ್ ಎಚ್. ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಜಗದೀಶ್ವರಿ ಎ. ನಾಸಿ ವಿಶೇಷ ಅತಿಥಿಯಾಗಿ ಉಪಸ್ಥಿತರಲಿದ್ದಾರೆ. ಬಿಸಿಲು ಆರ್ಟ್ ಗ್ಯಾಲರಿಯ ಮುಖ್ಯಸ್ಥ ಹಾಗೂ ಹಿರಿಯ ಚಿತ್ರಕಲಾವಿದ ವಿ.ಬಿ. ಬಿರಾದಾರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಸುರೇಶ್ ಅವರು ವಿವಿಧ ಮಾಧ್ಯಮಗಳಲ್ಲಿ ರಚಿಸಿರುವ ಸುಮಾರು 15ಕ್ಕೂ ಹೆಚ್ಚು ಕಲಾಕೃತಿಗಳು ಪ್ರದರ್ಶನದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿವೆ. ಬೆಂಗಳೂರು, ಧಾರವಾಡ ಹಾಗೂ ಕಲಬುರಗಿ ಸೇರಿದಂತೆ ರಾಜ್ಯದ ವಿವಿಧೆಡೆ ನಡೆದ 10ಕ್ಕೂ ಹೆಚ್ಚು ಚಿತ್ರಕಲಾ ಪ್ರದರ್ಶನಗಳಲ್ಲಿ ಅವರು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.

ಚಿತ್ರಕಲೆಯಲ್ಲಿ ವಿಶೇಷ ಡಿಪ್ಲೊಮಾ ಪಡೆದಿರುವ ಸುರೇಶ್ ಅವರು ಕಲಬುರಗಿ ಕಲಾ ಮಹೋತ್ಸವ, ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಗದಗಿನ ವಿಜಯ ಕಲಾ ಮಂದಿರದ ಅಮೃತ ಮಹೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button