ಬೀದರ್ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿ: ಎಕರೆಗೆ ₹50 ಸಾವಿರ ಪರಿಹಾರಕ್ಕೆ ಬಿಜೆಪಿ ಆಗ್ರಹ
ರೈತರ ಸಂಕಷ್ಟ, ಕುಡಿಯುವ ನೀರು, ಕಾನೂನು ಸುವ್ಯವಸ್ಥೆ ಸೇರಿ ಹಲವು ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರವನ್ನು ಒತ್ತಾಯಿಸಿದ ಬಿಜೆಪಿ

ಬೀದರ್, ಜು.22: ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಈಶ್ವರಸಿಂಗ್ ಠಾಕೂರ್ ಆಗ್ರಹಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಗಾಲ ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ಸಮರ್ಪಕ ಮಳೆಯಾಗಿಲ್ಲ. ಬಿತ್ತನೆ ಮಾಡಿದ ಬೆಳೆಗಳು ಒಣಗುತ್ತಿದ್ದು, ಇನ್ನೂ ಅನೇಕ ಕಡೆ ಬಿತ್ತನೆಯೇ ಆರಂಭವಾಗಿಲ್ಲ. ಹೀಗಾಗಿ ಸರ್ಕಾರ ಯಾವುದೇ ವಿಳಂಬ ಮಾಡದೆ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕೆಂದು ಒತ್ತಾಯಿಸಿದರು.
ಜನವಾಡ, ಸಂಗನಳ್ಳಿ, ಹಿಪ್ಪಳಗಾಂವ್ ಸೇರಿದಂತೆ ಹಲವು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಹಾಳಾಗಿದ್ದು, ತಂತಿಗಳು ತುಂಡಾಗಿ ಬೆಂಕಿ ಅವಘಡಗಳೂ ಸಂಭವಿಸಿವೆ ಎಂದು ಆರೋಪಿಸಿದ ಅವರು, ಜನವಾಡ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣಗಳ ಆರೋಪಿಗಳನ್ನು ಇದುವರೆಗೂ ಬಂಧಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳೀಯ ಶಾಸಕರು ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ವಿಧವಾ ವೇತನ, ಸಂಧ್ಯಾ ಸುರಕ್ಷಾ, ವಿಶೇಷಚೇತನರ ಮಾಸಾಶನ, ಗೃಹಲಕ್ಷ್ಮಿ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯಗಳು ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಖಾತೆ ವರ್ಗಾವಣೆ, ಆಸ್ತಿ ನೋಂದಣಿ ಹಾಗೂ ಆದಾಯ ಮತ್ತು ಜಾತಿ ಪ್ರಮಾಣಪತ್ರಗಳಂತಹ ಮೂಲಭೂತ ಸೇವೆಗಳಲ್ಲಿಯೂ ವಿಳಂಬವಾಗುತ್ತಿದೆ ಎಂದು ಅವರು ದೂರಿದರು.
ಜನವಾಡ ಶುದ್ಧ ನೀರಿನ ಘಟಕವನ್ನು ದುರಸ್ತಿಗೊಳಿಸಿ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಬೇಕು. ಅಲ್ಲದೆ ಚಮಕೋಡ–ಅಲ್ಲಾಪುರ ಹಾಗೂ ಚಮಕೋಡ–ನೇಮತಾಬಾದ್ ಗ್ರಾಮಗಳ ಸಂಪರ್ಕ ರಸ್ತೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಎಲ್ಲ ಬೇಡಿಕೆಗಳನ್ನು 15 ದಿನಗಳೊಳಗೆ ಈಡೇರಿಸದಿದ್ದರೆ ಜನವಾಡ ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಈಶ್ವರಸಿಂಗ್ ಠಾಕೂರ್ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಓರಾಡೆ, ರಾಜೇಂದ್ರ ಪೂಜಾರಿ, ಗ್ರಾಮೀಣ ಮಂಡಲ ಅಧ್ಯಕ್ಷ ದೀಪಕ್ ಗಾದಗಿ, ನಾಗೇಂದ್ರ ಪಾಟೀಲ್, ನಿಜಲಿಂಗಪ್ಪ ಪಾಟೀಲ್ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.



