ಅಪರಾಧ

ಆಸ್ತಿ ಮ್ಯೂಟೇಷನ್‌ಗೆ ₹9,950 ಲಂಚ: ಹಾಗರಗಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

ವೃದ್ಧೆಯ ಹೆಸರಿಗೆ ಆಸ್ತಿ ವರ್ಗಾವಣೆ ಮಾಡಲು ಲಂಚ ಬೇಡಿಕೆ; ಹಣ ಸ್ವೀಕರಿಸುವಾಗ ಬಣ್ಣ ಬಯಲು

ಕಲಬುರಗಿ, ಆ.3: ವೃದ್ಧೆಯೊಬ್ಬರ ಹೆಸರಿಗೆ ಮೃತ ಪತಿಯ ಆಸ್ತಿಯನ್ನು ಮ್ಯೂಟೇಷನ್ (ಹಕ್ಕು ವರ್ಗಾವಣೆ) ಮಾಡಲು ₹9,950 ಲಂಚ ಪಡೆಯುತ್ತಿದ್ದ ಹಾಗರಗಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಸೋಮವಾರ ವರದಿಯಾಗಿದೆ.

ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿದ್ದರಾಜು ಸಿ. ಅವರ ಮಾರ್ಗದರ್ಶನದಲ್ಲಿ, ಸಂಜೀವ್ (ಕಿಶನ್ ಪವಾರ್ ಅವರ ಅಳಿಯ) ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.

ದೂರಿನ ಪ್ರಕಾರ, ದಸ್ಮಾಬಾಯಿ ಕಿಶನ್ ಪವಾರ್ ಅವರ ಪತಿ ನಿಧನ ಹೊಂದಿದ್ದು, ವೃದ್ಧಾಪ್ಯದ ಕಾರಣದಿಂದ ಅವರ ಹೆಸರಿಗೆ ಆಸ್ತಿ ಮ್ಯೂಟೇಷನ್ ಮಾಡಿಸಲು ಸಾಧ್ಯವಾಗಿರಲಿಲ್ಲ. ಅಜಾದಪುರ ಗ್ರಾಮದ ಸರ್ವೆ ಸಂಖ್ಯೆ 111/1ರಲ್ಲಿರುವ ನಿವೇಶನವನ್ನು ಮೃತ ಕಿಶನ್ ಪವಾರ್ ಅವರ ಹೆಸರಿನಿಂದ ದಸ್ಮಾಬಾಯಿ ಅವರ ಹೆಸರಿಗೆ ವರ್ಗಾವಣೆ ಮಾಡುವಂತೆ ಗ್ರಾಮ ಪಂಚಾಯಿತಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಲಾಗಿತ್ತು.

ಮೃತರ ಮರಣ ಪ್ರಮಾಣಪತ್ರ, ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳು, ಸ್ಟಾಂಪ್ ಪತ್ರ ಹಾಗೂ ಇತರ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರೂ ಕಾರ್ಯದರ್ಶಿ ಮ್ಯೂಟೇಷನ್ ಪ್ರಕ್ರಿಯೆ ಪೂರ್ಣಗೊಳಿಸದೆ, ಕೆಲಸ ಮಾಡಿಕೊಡಲು ₹9,950 ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿ, ಕಾರ್ಯದರ್ಶಿ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಅವರನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಆರೋಪಿಯನ್ನು ವಿಚಾರಣೆಯ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತನಿಖಾಧಿಕಾರಿ ಪಿಐ ರವಿ ಪವಾರ್ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button