ಫ.ಗು. ಹಳಕಟ್ಟಿ ಅವರ ಸೇವೆ ಕನ್ನಡ ಸಾಹಿತ್ಯಕ್ಕೆ ಅವಿಸ್ಮರಣೀಯ: ಜಯಶ್ರೀ ಚಟ್ನಳ್ಳಿ
ಗುರುಬಸವ ಸೇವಾ ಪ್ರತಿಷ್ಠಾನದ ವಾರ್ಷಿಕೋತ್ಸವದಲ್ಲಿ ವಚನ ಸಾಹಿತ್ಯದ ಮಹತ್ವದ ಕುರಿತು ವಿಶೇಷ ಉಪನ್ಯಾಸ

ಕಲಬುರಗಿಯ ಬಸವ ಮಂಟಪದಲ್ಲಿ ಗುರುಬಸವ ಸೇವಾ ಪ್ರತಿಷ್ಠಾನದ 5ನೇ ವಾರ್ಷಿಕೋತ್ಸವ ಹಾಗೂ ಲಿಂ. ಬಸವರಾಜ ನಾಗೂರ ಅವರ 6ನೇ ಸ್ಮರಣೋತ್ಸವ ಅಂಗವಾಗಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶರಣ ಚಿಂತಕಿ ಜಯಶ್ರೀ ಚಟ್ನಳ್ಳಿ ಅವರು ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ ಸೇವೆಯನ್ನು ಸ್ಮರಿಸಿದರು.
ವಿಶೇಷ ಉಪನ್ಯಾಸ ನೀಡಿದ ಅವರು, ಡಾ. ಫ.ಗು. ಹಳಕಟ್ಟಿ ಅವರು ವಚನ ಸಾಹಿತ್ಯದ ಸಂಶೋಧನೆ, ಸಂಗ್ರಹ ಹಾಗೂ ಪರಿಷ್ಕರಣೆಯ ಮೂಲಕ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಒಂದು ವಿಶ್ವವಿದ್ಯಾಲಯ ಮಾಡಬಹುದಾದಷ್ಟು ಕಾರ್ಯವನ್ನು ಒಬ್ಬರೇ ನಿರ್ವಹಿಸಿ ವಚನ ಸಾಹಿತ್ಯವನ್ನು ಉಳಿಸಿ ಬೆಳೆಸಿದ ಅವರ ಸೇವೆ ಸದಾ ಸ್ಮರಣೀಯವಾಗಿದ್ದು, ಅವರ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬೀದರದ ಶರಣ ಸಾಹಿತಿ ಪ್ರಕಾಶ ಗಂಧಿಗುಡಿ ಅವರು, ಬಸವಾದಿ ಶರಣರ ತತ್ವಗಳು ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಮಾರ್ಗದರ್ಶಿಯಾಗಿದ್ದು, ಇಂದಿನ ಸಮಾಜದಲ್ಲಿಯೂ ಅವುಗಳ ಪ್ರಸ್ತುತತೆ ಹೆಚ್ಚಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಗುರುಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶರಣಬಸಪ್ಪ ನಾಗೂರ ಅವರು, ಶರಣರ ಆದರ್ಶಗಳು ಸಮಾಜದ ಜೀವಾಳವಾಗಿದ್ದು, ಅವುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.
ಬಸವಕಲ್ಯಾಣದ ಗುಣತೀರ್ಥವಾಡಿಯ ಪೂಜ್ಯ ಬಸವಪ್ರಭು ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿಯ ಗೌರವಾಧ್ಯಕ್ಷ ಬಾಬುರಾವ ಶೇರಿಕಾರ, ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಶರಣ ಆರ್.ಜಿ. ಶೆಟಗಾರ, ಕಾಯಕ ರತ್ನ ಪ್ರಶಸ್ತಿ ಪುರಸ್ಕೃತ ಬಸವರಾಜ ಧೂಳಾಗುಂಡಿ ಹಾಗೂ ನಿಷ್ಪತ್ತಿ ಬಸವರಾಜ ಪರಶೆಟ್ಟಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಮಾತಾಜಿ ಎಂ. ಗೋಳಾ, ಬಸವರಾಜ ಪರಶೆಟ್ಟಿ, ರವೀಂದ್ರ ಶಾಬಾದಿ ಸೇರಿದಂತೆ ಪ್ರತಿಷ್ಠಾನದ ಪದಾಧಿಕಾರಿಗಳು ಹಾಗೂ ಸದಸ್ಯರಾದ ಮಹಾದೇವಿ ಭರಶೆಟ್ಟಿ, ವಿಜಯಲಕ್ಷ್ಮೀ ಪಾಟೀಲ, ಕಮಲಾಬಾಯಿ ಶಾಬಾದಿ, ಶಾರದಾ ಜಾಕಾ, ಕವಿತಾ ನಾಗೂರ, ಶಿವಲಿಂಗಮ್ಮ ನಾಗೂರ, ಶಿವಕುಮಾರ ಶಾಬಾದಿ, ಶಿವಶಂಕರ ನಾಗೂರ ಮತ್ತು ಬಸವಪ್ರಭು ಶಾಬಾದಿ ಉಪಸ್ಥಿತರಿದ್ದರು. ಶರಣರ ವಚನ ಗಾಯನ, ಬಸವ ತತ್ವಗಳ ಪ್ರಚಾರ ಹಾಗೂ ಸಮಾಜಮುಖಿ ಸೇವೆಯ ಸಂಕಲ್ಪದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.



