ಗೃಹಜ್ಯೋತಿ ಪರಿಷ್ಕರಣೆಗೆ ಸಾರ್ವಜನಿಕರು ಸಹಕರಿಸಿ: ಶೌಕತ್ ಅಲಿ ಅಲೂರ್
ಜೆಸ್ಕಾಂ ವತಿಯಿಂದ ಗ್ರಾಮಗಳಲ್ಲಿ ಪರಿಷ್ಕರಣೆ ಅಭಿಯಾನ ಆರಂಭ; ಅಗತ್ಯ ದಾಖಲೆಗಳನ್ನು ಸಿದ್ಧವಾಗಿಡುವಂತೆ ಮನವಿ

ಜೇವರ್ಗಿ, ಜು.28: ಸರ್ಕಾರದ ಗೃಹಜ್ಯೋತಿ ಯೋಜನೆಯ ಪರಿಷ್ಕರಣೆ ಕಾರ್ಯ ಯಶಸ್ವಿಯಾಗಲು ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶೌಕತ್ ಅಲಿ ಅಲೂರ್ ಮನವಿ ಮಾಡಿದರು.
ತಾಲೂಕಿನ ಸೊನ್ನ ಗ್ರಾಮದಲ್ಲಿ ಸೋಮವಾರ ಜೆಸ್ಕಾಂ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಗೃಹಜ್ಯೋತಿ ಪರಿಷ್ಕರಣೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನಾದ್ಯಂತ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಸಿಬ್ಬಂದಿ ಮನೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಸಾರ್ವಜನಿಕರು ವಿದ್ಯುತ್ ಬಿಲ್, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸಂಖ್ಯೆ ಹಾಗೂ ಮತದಾರರ ಗುರುತಿನ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಕೋರಿದರು.
ಅರ್ಹ ಫಲಾನುಭವಿಗಳಿಗೆ ಗೃಹಜ್ಯೋತಿ ಯೋಜನೆಯ ಸೌಲಭ್ಯ ಸಮರ್ಪಕವಾಗಿ ತಲುಪಿಸುವ ಉದ್ದೇಶದಿಂದ ಸರ್ಕಾರ ಈ ಪರಿಷ್ಕರಣೆ ಅಭಿಯಾನ ಕೈಗೊಂಡಿದೆ. ಯೋಜನೆಯ ದುರುಪಯೋಗ ತಡೆದು ನಿಜವಾದ ಅರ್ಹರಿಗೆ ಪ್ರಯೋಜನ ದೊರಕುವಂತೆ ಮಾಡುವುದೇ ಇದರ ಮುಖ್ಯ ಉದ್ದೇಶ ಎಂದು ಶೌಕತ್ ಅಲಿ ಅಲೂರ್ ತಿಳಿಸಿದರು.
ಈ ಸಂದರ್ಭದಲ್ಲಿ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಲಖನಸಿಂಗ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಅಂಜನಾಬಾಯಿ ರಾಠೋಡ್, ರುಕುಂ ತೋಳಾ ಬಾಗವಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



