ಕಲೆಸಾಂಸ್ಕೃತಿಕ

ಆಗಸ್ಟ್‌ 9ರಂದು ಕಲಬುರಗಿಯಲ್ಲಿ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ; ಡ್ಯಾನ್ಸ್ ಸಂಘದ 100ನೇ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ

99 ಯಶಸ್ವಿ ಕಾರ್ಯಕ್ರಮಗಳ ಬಳಿಕ ಶತಕದ ಸಂಭ್ರಮ; ಜಿಲ್ಲೆಯ ವಿವಿಧ ಭಾಗಗಳ ಕಲಾವಿದರ ಭಾಗಿ

ಕಲಬುರಗಿ, ಆ.5: ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಆಗಸ್ಟ್‌ 9ರಂದು ಜಾನಪದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದು ಗುಲ್ಬರ್ಗಾ ಡ್ಯಾನ್ಸ್ ಸಂಘದ 100ನೇ ಕಾರ್ಯಕ್ರಮವಾಗಿರುವುದು ವಿಶೇಷ ಎಂದು ಸಂಘದ ಅಧ್ಯಕ್ಷ ಅಕ್ಷಯ್ (ಯಂಕಪ್ಪ) ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2001ರಿಂದ ಸಂಘವು ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಇದುವರೆಗೆ 99 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ. ಇದೀಗ 100ನೇ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಉದ್ಘಾಟಿಸಲಿದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೇವ್ ಗುತ್ತೇದಾರ್ ಕಾಳಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಗೊಂದೆಡ್ಲಿ ಪಂಚಕಾಂತಮಠದ ಮಹೇಶ್ವರ ಶಾಸ್ತ್ರಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.

ಮಾಜಿ ಮಹಾಪೌರ ಸಂಜಯ್‌ಸಿಂಗ್, ಮುಖಂಡರಾದ ನೀಲಕಂಠ ಮೂಲಗೆ, ಫರಾಜ್ ಉಲ್ ಇಸ್ಲಾಂ, ಕೃಷ್ಣರೆಡ್ಡಿ, ರವೀಂದ್ರ ಗುತ್ತೇದಾರ್ ಸೇರಿದಂತೆ ಹಲವರು ಜ್ಯೋತಿ ಬೆಳಗಿಸಲಿದ್ದಾರೆ. ನಿವೃತ್ತ ಅಧಿಕಾರಿ ಡಾ. ಸುರೇಶ್ ಎಲ್. ಶರ್ಮಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಅಭಿಷೇಕ್ ಬಾಲಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಉಪಾಧ್ಯಕ್ಷ ವಿಜಯಕುಮಾರ್ ಕಟ್ಟಿಮನಿ, ಅನಿರುದ್ಧ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಡಾ. ಪರಮೇಶ್ವರ ಎಸ್. ಬಸನಸೋಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸವಿತಾ ಎಚ್. ಓಂಟಿ, ಸಮಾಜ ಸೇವಕರು, ಶಿಕ್ಷಣ ತಜ್ಞರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.

ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳ ಕಲಾವಿದರು ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದು, ವಿಜೇತರಿಗೆ ನಗದು ಬಹುಮಾನ ಹಾಗೂ ಟ್ರೋಫಿ ಪ್ರದಾನ ಮಾಡಲಾಗುವುದು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ಜ್ಯೋತಿ ಅಕ್ಷಯ್, ಶಿವರಾಜ್ ಲೋಹಾರ್, ದಿನೇಶ್ ನಾಯಕ್, ವೀರೂ ನಾಟೀಕಾರ್, ವಿಜಯ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button