ಕಾರಾಗೃಹದ ಬಂದಿಗಳಿಗೆ ಉಚಿತ ದಂತ ತಪಾಸಣೆ ಶಿಬಿರ: 85 ಕೈದಿಗಳ ಆರೋಗ್ಯ ಪರೀಕ್ಷೆ
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕಾರ್ಮಲ್ ಜ್ಯೋತಿ ಟ್ರಸ್ಟ್ ಹಾಗೂ ಅಲ್ ಬದರ್ ಡೆಂಟಲ್ ಆಸ್ಪತ್ರೆ ಸಹಯೋಗ

ಕಲಬುರಗಿ ಕೇಂದ್ರ ಕಾರಾಗೃಹ, ಕಡಗಂಚಿ ಕಾರ್ಮಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ (ರಿ) ಹಾಗೂ ಕಲಬುರಗಿ ಅಲ್ ಬದರ್ ಡೆಂಟಲ್ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಕೇಂದ್ರ ಕಾರಾಗೃಹದಲ್ಲಿ ಬಂದಿಗಳಿಗಾಗಿ ಉಚಿತ ದಂತ (ಹಲ್ಲಿನ) ತಪಾಸಣೆ ಶಿಬಿರವನ್ನು ಬುಧವಾರ ಆಯೋಜಿಸಲಾಯಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಕಾರ್ಮಲ್ ಜ್ಯೋತಿ ಟ್ರಸ್ಟ್ನ ಕಾರ್ಯದರ್ಶಿ ಫಾದರ್ ವಿಲಿಯಮ್ ಮಿರಿಂಡಾ, ಆರೋಗ್ಯದ ದೃಷ್ಟಿಯಿಂದ ಬಂದಿಗಳಿಗೆ ಹಲ್ಲಿನ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಇತರೆ ಆರೋಗ್ಯ ಸಮಸ್ಯೆಗಳಿಗೂ ಇದೇ ರೀತಿಯ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುವುದು ಎಂದರು.
ಅಲ್ ಬದರ್ ಡೆಂಟಲ್ ಆಸ್ಪತ್ರೆಯ ವಿಭಾಗದ ಮುಖ್ಯಸ್ಥೆ ಡಾ. ಸಂಗೀತಾ ಮಾತನಾಡಿ, ಹಲ್ಲು ದೇಹದ ಪ್ರಮುಖ ಅಂಗವಾಗಿದ್ದು, ಅದರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಪ್ರತಿದಿನ ಎರಡು ಬಾರಿ ಹಲ್ಲುಗಳನ್ನು ಬ್ರಷ್ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಹಲ್ಲಿನ ಆರೋಗ್ಯ ಉತ್ತಮವಾಗಿದ್ದರೆ ಆಹಾರ ಸೇವನೆ, ಮಾತುಕತೆ ಹಾಗೂ ದೈಹಿಕ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ರಾಕೇಶ್ ಕಾಂಬಳೆ ಅವರು ಬಂದಿಗಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವ ಉದ್ದೇಶದಿಂದ ಇಂತಹ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಶಿಬಿರದಲ್ಲಿ ವೈದ್ಯಾಧಿಕಾರಿಗಳಾದ ಡಾ. ಸಂತೋಷ, ಡಾ. ರವೀಂದ್ರ ಬನ್ನೇರಿ, ಡಾ. ಅಬ್ದುಲ್ ಸೇರಿದಂತೆ ವೈದ್ಯರ ತಂಡ ಬಂದಿಗಳ ದಂತ ತಪಾಸಣೆ ನಡೆಸಿತು. ಒಟ್ಟು 85 ಬಂದಿಗಳಿಗೆ ಹಲ್ಲಿನ ತಪಾಸಣೆ ಹಾಗೂ ಸಂಚಾರಿ ವೈದ್ಯಕೀಯ ಬಸ್ ಮೂಲಕ ಸ್ಕ್ರೀನಿಂಗ್ ಪರೀಕ್ಷೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಸಹಾಯಕ ಅಧೀಕ್ಷಕ ಚನ್ನಪ್ಪ, ಜೈಲರ್ಗಳಾದ ಶ್ರೀಮಂತಗೌಡ ಪಾಟೀಲ್, ಶ್ಯಾಮ ಬಿದ್ರಿ, ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ ಡಾಂಗೆ ಹಾಗೂ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಸಹಾಯಕ ಅಧೀಕ್ಷಕ ಬಿ. ಸುರೇಶ್ ಸ್ವಾಗತಿಸಿದರು. ಶಿಕ್ಷಕರಾದ ನಾಗರಾಜ ಮುಲಗೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

