ಡಾ. ವೈಜನಾಥ ಪಾಟೀಲ ಜನ್ಮದಿನ ಅಂಗವಾಗಿ ಜು.29ರಂದು 371(ಜೆ) ಜಾರಿ ಕುರಿತ ಚಿಂತನ ಸಭೆ
ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿ, 371(ಜೆ) ಪೂರ್ಣ ಅನುಷ್ಠಾನ ಹಾಗೂ ಪ್ರಾದೇಶಿಕ ಸಮಸ್ಯೆಗಳ ಕುರಿತು ಚರ್ಚೆ

ಕಲಬುರಗಿ, ಜು.27: 371(ಜೆ) ಹೋರಾಟದ ಪ್ರಮುಖ ರೂವಾರಿ, ಮಾಜಿ ಸಚಿವ ದಿವಂಗತ ಡಾ. ವೈಜನಾಥ ಪಾಟೀಲ ಅವರ ಜನ್ಮದಿನದ ಅಂಗವಾಗಿ ಜುಲೈ 29ರಂದು ಬೆಳಿಗ್ಗೆ 11 ಗಂಟೆಗೆ ನಗರದ ಸೂಪರ್ ಮಾರ್ಕೆಟ್‌ನಲ್ಲಿರುವ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ 371(ಜೆ) ಪೂರ್ಣ ಅನುಷ್ಠಾನ ಕುರಿತ ಚಿಂತನ ಸಭೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಶರಣು ಪಪ್ಪಾ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ವೈಜನಾಥ ಪಾಟೀಲ ಅವರ ಆದರ್ಶಗಳನ್ನು ಸ್ಮರಿಸುವುದರ ಜೊತೆಗೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 371(ಜೆ) ಸಂವಿಧಾನಾತ್ಮಕ ಅವಕಾಶಗಳ ಪರಿಣಾಮಕಾರಿ ಅನುಷ್ಠಾನ, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಮುಂದಿನ ಕಾರ್ಯತಂತ್ರ ಹಾಗೂ ಪ್ರಾದೇಶಿಕ ಅಭಿವೃದ್ಧಿಯ ವಿಚಾರಗಳ ಕುರಿತು ಸಮಗ್ರ ಚರ್ಚೆ ನಡೆಸಲಾಗುವುದು ಎಂದರು.
371(ಜೆ) ಜಾರಿಯಾದರೂ ಅನೇಕ ಸರ್ಕಾರಿ ಹುದ್ದೆಗಳು ಇನ್ನೂ ಭರ್ತಿಯಾಗಿಲ್ಲ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ನಿರೀಕ್ಷಿತ ಅಭಿವೃದ್ಧಿ ಇನ್ನೂ ಸಾಧ್ಯವಾಗಿಲ್ಲ. ಆದ್ದರಿಂದ ಸಂವಿಧಾನದ 371(ಜೆ) ವಿಧಿಯನ್ನು ಸಂಪೂರ್ಣವಾಗಿ ಜಾರಿಗೊಳಿಸುವುದು, ಗೋವಿಂದರಾವ್ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದು, ರೈಲು, ರಸ್ತೆ ಹಾಗೂ ವಿಮಾನ ಸಂಪರ್ಕವನ್ನು ವಿಸ್ತರಿಸುವುದು ಮತ್ತು ಪ್ರದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಅಗತ್ಯ ಎಂದು ಅವರು ಒತ್ತಾಯಿಸಿದರು.
ಕಲಬುರಗಿಯಲ್ಲಿ ಪ್ರತ್ಯೇಕ ರೈಲ್ವೆ ವಿಭಾಗ ಸ್ಥಾಪನೆ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಹೆಚ್ಚಿನ ಅನುದಾನ, ಕೈಗಾರಿಕಾ ಕಾರಿಡಾರ್ ಹಾಗೂ ವಿಶೇಷ ಆರ್ಥಿಕ ವಲಯಗಳ ಸ್ಥಾಪನೆ, 371(ಜೆ) ಅಡಿಯಲ್ಲಿ ನೇಮಕಾತಿಗಳಲ್ಲಿ ಪಾರದರ್ಶಕತೆ, ನ್ಯಾಯಮಂಡಳಿ ಸ್ಥಾಪನೆ ಹಾಗೂ ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಶಿಕ್ಷಣ, ಆರೋಗ್ಯ, ನೀರಾವರಿ ಹಾಗೂ ಕೈಗಾರಿಕಾ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಯುವಕರಿಗೆ ಹೆಚ್ಚಿನ ಉದ್ಯೋಗ ಮತ್ತು ಕೌಶಲಾಭಿವೃದ್ಧಿ ಅವಕಾಶಗಳನ್ನು ಕಲ್ಪಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪ್ರದೇಶಕ್ಕೆ ನ್ಯಾಯಯುತ ಅನುದಾನ ದೊರಕುವಂತೆ ಕ್ರಮ ಕೈಗೊಳ್ಳಬೇಕು. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ, ನೀರಾವರಿ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸುವುದು, ಶಿಕ್ಷಣ ಸಂಸ್ಥೆಗಳು ಮತ್ತು ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಿಸುವುದು ಸೇರಿದಂತೆ ಹಲವು ವಿಷಯಗಳು ಚಿಂತನ ಸಭೆಯಲ್ಲಿ ಚರ್ಚೆಯಾಗಲಿವೆ ಎಂದು ತಿಳಿಸಿದರು.
ಸಭೆಯಲ್ಲಿ ಡಾ. ಬಸವರಾಜ ಕುಮನೂರ, ಉಮಾಕಾಂತ ನಿಗೂಡಗಿ, ಶಿವಶಂಕರ ಗಾರಂಪಳ್ಳಿ, ಚಂದ್ರಶೇಖರ ಆವಂಟಿ, ಸುರೇಶ್ ಸಜ್ಜನ್, ಮಹೇಶರೆಡ್ಡಿ ಮುನ್ನಾಳ, ಡಾ. ರಾಜು ಕುಳಗೇರಿ, ಡಾ. ವಾಸುದೇವ ಸೇಡಂ, ಶ್ರೀ ಗುಪ್ತಲಿಂಗ ಬಿರಾದಾರ, ಅಶೋಕ್ ಗುರುಜಿ, ಅಲ್ಲಂಪ್ರಭು ಬೆಟ್ಟದೂರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಹರಸೂರ, ಗೌತಮ್ ವೈಜನಾಥ ಪಾಟೀಲ, ಕುಪೇಂದ್ರ ಪಾಟೀಲ, ಗಂಗಾಧರ ಕುಷ್ಟಗಿ, ರಾಜೇಂದ್ರ ಕರೆಕಲ್, ಮಲ್ಲಿನಾಥ ಕಾಳಗಿ, ಓಂಪ್ರಕಾಶ ಹೆಬ್ಬಾಳ, ಸದ್ದಾಂ ವಜ್ಜರಗಾ, ರವಿರಾಜ ಕೊರವಿ ಮತ್ತಿತರರು ಉಪಸ್ಥಿತರಿದ್ದರು.



