
ಜೇವರ್ಗಿ, ಜು.25: ಕಳೆದ 25 ವರ್ಷಗಳಿಂದ ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಬಿಸಿಯೂಟ ಯೋಜನೆಯಡಿ ಸೇವೆ ಸಲ್ಲಿಸುತ್ತಿರುವ ಬಿಸಿಯೂಟ ತಯಾರಕರನ್ನು ಸರ್ಕಾರಿ ಕಾರ್ಮಿಕರೆಂದು ಪರಿಗಣಿಸಿ, ಕನಿಷ್ಠ ವೇತನ ಯೋಜನೆಯ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ತಾಲೂಕು ಸಂಚಾಲಕ ಸಿದ್ದು ಕೇರೂರು ಆಗ್ರಹಿಸಿದರು.
ಈ ಕುರಿತು ಪ್ರಕಟಣೆ ನೀಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಮುಖ್ಯ ಅಡುಗೆ ತಯಾರಕರಿಗೆ ಮಾಸಿಕ ₹4,700 ಹಾಗೂ ಸಹಾಯಕ ಅಡುಗೆ ತಯಾರಕರಿಗೆ ₹4,600 ಮಾತ್ರ ಗೌರವಧನ ನೀಡಲಾಗುತ್ತಿದೆ. ಈ ಅಲ್ಪ ಮೊತ್ತದಲ್ಲಿ ಜೀವನ ನಿರ್ವಹಣೆ ಅತ್ಯಂತ ಕಷ್ಟಕರವಾಗಿದ್ದು, ಸರ್ಕಾರ ಬಿಸಿಯೂಟ ತಯಾರಕರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಸುಮಾರು 1.50 ಲಕ್ಷ ಬಿಸಿಯೂಟ ತಯಾರಕರು ಕಾರ್ಯನಿರ್ವಹಿಸುತ್ತಿದ್ದು, 2022-23ನೇ ಸಾಲಿನಿಂದ ಬಾಕಿ ಉಳಿದಿರುವ ಗೌರವಧನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು. 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಕೇವಲ ಇಬ್ಬರು ಅಡುಗೆ ಸಿಬ್ಬಂದಿಯಿಂದ ಕೆಲಸ ನಿರ್ವಹಿಸುವುದು ದುಸ್ತರವಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಅವರು ತಿಳಿಸಿದರು.
ಕರ್ತವ್ಯ ನಿರ್ವಹಣೆಯ ವೇಳೆ ಬಿಸಿಯೂಟ ತಯಾರಕರು ಮೃತಪಟ್ಟರೆ ₹20 ಲಕ್ಷ ಪರಿಹಾರ ನೀಡಬೇಕು. ಅವರ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ಕಲ್ಪಿಸಬೇಕು. ಕೆಲಸದ ಸಂದರ್ಭದಲ್ಲಿ ಅಪಘಾತ ಸಂಭವಿಸಿದರೆ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಅಲ್ಲದೆ, ಇಎಸ್ಐ ಸೇರಿದಂತೆ ಅಗತ್ಯ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ವಿಸ್ತರಿಸಿ, ಬಿಸಿಯೂಟ ತಯಾರಕರಿಗೆ ಸರ್ಕಾರಿ ಕಾರ್ಮಿಕರ ಮಾನ್ಯತೆ ನೀಡಬೇಕು ಎಂದು ಸಿದ್ದು ಕೇರೂರು ಸರ್ಕಾರವನ್ನು ಒತ್ತಾಯಿಸಿದರು.



