ಸಮಾಜ

ಕ್ರಿಶ್ಚಿಯನ್ ಸಮುದಾಯದ ಶಿಕ್ಷಣ, ಅಭಿವೃದ್ಧಿಗೆ ₹95 ಕೋಟಿ ಅನುದಾನ: ಸಂಜಯ ಜಾಗಿರದಾರ್

₹45 ಕೋಟಿ ಶಿಕ್ಷಣಕ್ಕೆ ಮೀಸಲು, ಉಚಿತ ಕೋಚಿಂಗ್, ವಿದೇಶಿ ವ್ಯಾಸಂಗ ಸಹಾಯ ಹೆಚ್ಚಳ – ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ

ಕ್ರಿಶ್ಚಿಯನ್ ಸಮುದಾಯದ ಸಮಗ್ರ ಅಭಿವೃದ್ಧಿಗೆ ಒಗ್ಗಟ್ಟು ಅತ್ಯಗತ್ಯವಾಗಿದ್ದು, ಸರ್ಕಾರದಿಂದ ಬಿಡುಗಡೆಯಾಗಿರುವ ₹95 ಕೋಟಿ ಅನುದಾನದಲ್ಲಿ ₹45 ಕೋಟಿಯನ್ನು ಶಿಕ್ಷಣಕ್ಕಾಗಿ ಮೀಸಲಿಡಲಾಗಿದೆ ಎಂದು ಬೆಂಗಳೂರು ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಸಂಜಯ ಜಾಗಿರದಾರ್ ಹೇಳಿದರು.

ನಗರದ ಐವಾನ್-ಎ-ಶಾಹಿ ಹೊಸ ಅತಿಥಿಗೃಹ ಸಭಾಂಗಣದಲ್ಲಿ ಶುಕ್ರವಾರ ನಡೆದ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಜಾರಿಗೊಳಿಸಿರುವ ವಿವಿಧ ಕಲ್ಯಾಣ ಯೋಜನೆಗಳು ಮತ್ತು ಅನುದಾನಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ತಲುಪುವಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚಿಸಿದರು.

ಕ್ರಿಶ್ಚಿಯನ್ ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂಬ ಉದ್ದೇಶದಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬೆಂಗಳೂರಿನಲ್ಲಿ ಆರು ತಿಂಗಳ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ವ್ಯವಸ್ಥೆ ಮಾಡಲಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಉಳಿದ ₹50 ಕೋಟಿ ಅನುದಾನವನ್ನು ಸಮುದಾಯ ಭವನಗಳ ನಿರ್ಮಾಣ, ಚರ್ಚ್‌ಗಳ ನವೀಕರಣ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಲಾಗುವುದು ಎಂದು ತಿಳಿಸಿದರು.

ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುವ ಕ್ರಿಶ್ಚಿಯನ್ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಧನಸಹಾಯವನ್ನು ₹20 ಲಕ್ಷದಿಂದ ₹30 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಮಹಿಳೆಯರ ಸ್ವಯಂ ಉದ್ಯೋಗಕ್ಕಾಗಿ ₹2 ಲಕ್ಷ ಅನುದಾನ ನೀಡಲಾಗುತ್ತಿದ್ದು, ‘ಆಹಾರ ವಾಹನ’ ಖರೀದಿಗೆ ₹2 ಲಕ್ಷದಿಂದ ₹8 ಲಕ್ಷದವರೆಗೆ ನೆರವು ಒದಗಿಸಲಾಗುತ್ತಿದೆ. ಸ್ವಂತ ನಿವೇಶನ ಹೊಂದಿರುವವರಿಗೆ ಮನೆ ನಿರ್ಮಾಣಕ್ಕಾಗಿ ₹2.70 ಲಕ್ಷದಿಂದ ₹3 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತಿದೆ ಎಂದು ವಿವರಿಸಿದರು.

ಚರ್ಚ್‌ಗಳ ನವೀಕರಣ ಕಾಮಗಾರಿಗಳಿಗೆ ಡಿಜಿಟಲ್ ಖಾತೆ ಇಲ್ಲದಿದ್ದರೆ, ಸರ್ಕಾರ ನಿಗದಿಪಡಿಸಿರುವ ಐದು ಪ್ರಮಾಣಪತ್ರಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬಹುದಾಗಿದೆ. ಅರ್ಜಿದಾರರು ಅರ್ಜಿ ಸಲ್ಲಿಸಿದ ಬಳಿಕ ಸ್ವೀಕೃತಿ ಪತ್ರವನ್ನು ಕಡ್ಡಾಯವಾಗಿ ಪಡೆದು, ತಮ್ಮ ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.

ಯೋಜನೆಗಳ ಕುರಿತು ಮಾಹಿತಿ ಕೊರತೆಯನ್ನು ನಿವಾರಿಸಲು ಮುಂದಿನ ಭಾನುವಾರದಿಂದ ಚರ್ಚ್‌ಗಳಲ್ಲಿ ಪ್ರಾರ್ಥನೆಯ ನಂತರ ಕರಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಸಂಗಮೇಶ್ವರ, ಜಿಲ್ಲಾ ವ್ಯವಸ್ಥಾಪಕ ಹಜರತ್ ಅಲಿ, ಕಲಬುರಗಿ ಧರ್ಮಕ್ಷೇತ್ರದ ಚಾನ್ಸೆಲರ್ ಫಾದರ್ ಸ್ಟಾನಿ ಲೋಬೋ, ಅಖಿಲ ಭಾರತ ಕ್ರೈಸ್ತ ಮಹಾಸಭಾದ ಉಪಾಧ್ಯಕ್ಷೆ ಸಂಧ್ಯಾರಾಜ ಸಾಮವೇಲ್, ಸಿಮಿಯೋನ್ ಶಿರೋಮಣಿ, ಜಿಲ್ಲೆಯ ವಿವಿಧ ಚರ್ಚ್‌ಗಳ ಮುಖ್ಯಗುರುಗಳು, ಪಾದ್ರಿಗಳು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button