ಸಮಾಜ

ಅಂತರಜಾತಿ ವಿವಾಹ ಯೋಜನೆಯಲ್ಲಿ ಅಕ್ರಮ ಆರೋಪ; ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

2018ರಿಂದ 2026ರವರೆಗಿನ ಫಲಾನುಭವಿಗಳ ದಾಖಲೆಗಳ ಸಮಗ್ರ ತನಿಖೆಗೆ ಒತ್ತಾಯಿಸಿ ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರು ಪ್ರತಿಭಟನೆ

ಅಂತರಜಾತಿ ವಿವಾಹ ಯೋಜನೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅನುದಾನ ದುರುಪಯೋಗ ಮಾಡಲಾಗಿದೆ ಎಂದು ಆರೋಪಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯಕರ್ತರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಸಂಸ್ಥಾಪಕ ಗೌರವಾಧ್ಯಕ್ಷ ರವಿ ಕೃಷ್ಣರೆಡ್ಡಿ, ಜಿಲ್ಲಾಧ್ಯಕ್ಷ ಸಚಿನ್ ಚವ್ಹಾಣ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಬಳಿಕ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಪರಿಶಿಷ್ಟ ಜಾತಿ ಅಂತರಜಾತಿ ವಿವಾಹ ಯೋಜನೆ ಹಾಗೂ ಇತರೆ ಸಂಬಂಧಿತ ಯೋಜನೆಗಳಲ್ಲಿ 2018ರಿಂದ 2026ರವರೆಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಒಂದೇ ಫಲಾನುಭವಿಯ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿ ಅನುದಾನ ಪಡೆದಿರುವ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಯೋಜನೆಯ ನಿಯಮಗಳನ್ನು ಉಲ್ಲಂಘಿಸಿ, ನಿಗದಿತ ಅವಧಿ ಪೂರ್ಣಗೊಳ್ಳುವ ಮುನ್ನವೇ ಅನುದಾನ ಬಿಡುಗಡೆ ಮಾಡಿರುವ ಸಾಧ್ಯತೆಗಳನ್ನೂ ತನಿಖೆಗೆ ಒಳಪಡಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ಎಲ್ಲಾ 11 ತಾಲ್ಲೂಕುಗಳಲ್ಲಿ 2017ರಿಂದ 2026ರವರೆಗೆ ಸ್ವೀಕರಿಸಲಾದ ಒಟ್ಟು 1,652 ಅರ್ಜಿಗಳ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಪ್ರತಿ ಅರ್ಜಿಯ ಸಲ್ಲಿಕೆ ದಿನಾಂಕ, ಮೊದಲ ಹಾಗೂ ಎರಡನೇ ಕಂತಿನ ಅನುದಾನ ಬಿಡುಗಡೆ ದಿನಾಂಕ, ಮೊತ್ತ, ಬ್ಯಾಂಕ್ ಖಾತೆ ವಿವರಗಳು, ಹಣ ವರ್ಗಾವಣೆಯ ದಾಖಲೆ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸಿದರು.

ಇದೇ ವೇಳೆ ಪ್ರತಿ ಅರ್ಜಿಗೆ ಸಂಬಂಧಿಸಿದ ಪಂಚನಾಮೆ ವರದಿ, ವಿವಾಹ ನೋಂದಣಿ ಪ್ರಮಾಣಪತ್ರ, ವಧು-ವರರ ಶೈಕ್ಷಣಿಕ ದಾಖಲೆಗಳು, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳು, ಆಧಾರ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್, ಜಂಟಿ ಬ್ಯಾಂಕ್ ಖಾತೆ ವಿವರ ಸೇರಿದಂತೆ ಎಲ್ಲ ದಾಖಲೆಗಳ ಪರಿಶೀಲನಾ ವರದಿಯನ್ನು ಸಾರ್ವಜನಿಕರಿಗೆ ನೀಡಬೇಕು ಎಂದು ಮನವಿ ಸಲ್ಲಿಸಿದರು.

ಚಿಂಚೋಳಿ ತಾಲ್ಲೂಕಿನಲ್ಲಿ ಮಾತ್ರ ಇದುವರೆಗೆ 267 ಅರ್ಜಿಗಳು ಸ್ವೀಕರಿಸಲಾಗಿದ್ದು, ಅವುಗಳಿಗೂ ಸಂಬಂಧಿಸಿದಂತೆ ಅರ್ಜಿ ಸಲ್ಲಿಕೆ, ಅನುದಾನ ಬಿಡುಗಡೆ, ಬ್ಯಾಂಕ್ ವ್ಯವಹಾರ ಮತ್ತು ದಾಖಲೆಗಳ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಿ ಪಾರದರ್ಶಕ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Related Articles

Leave a Reply

Your email address will not be published. Required fields are marked *

Back to top button