ಕೇಂದ್ರ ಸಾರಿಗೆ ಸಚಿವಾಲಯದ ಅಧಿಕಾರಿಗಳ ಭೇಟಿ ಮಾಡಿದ ಶಾಸಕ ಎಂ.ವೈ. ಪಾಟೀಲ್: ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚೆ
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ಹೊಸ ರಸ್ತೆ ಸಂಪರ್ಕ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಹೆಚ್ಚುವರಿ ಇ-ಬಸ್‌ಗಳಿಗಾಗಿ ಮನವಿ

ನವದೆಹಲಿಯ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಹಾಗೂ ಅಸೋಸಿಯೇಷನ್ ಆಫ್ ಸ್ಟೇಟ್ ರೋಡ್ ಟ್ರಾನ್ಸ್‌ಪೋರ್ಟ್ ಅಂಡರ್ಟೇಕಿಂಗ್ಸ್ ಅಧ್ಯಕ್ಷ ವಿ. ಉಮಾಶಂಕರ್, ಐಎಎಸ್ ಅವರನ್ನು ಶಾಸಕ ಎಂ.ವೈ. ಪಾಟೀಲ್ ಭೇಟಿ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಮಹತ್ವದ ವಿಷಯಗಳ ಕುರಿತು ಚರ್ಚಿಸಿದರು.
ಭೇಟಿಯ ವೇಳೆ ದೇವಲಗಾಣಗಾಪುರ ಗ್ರಾಮಕ್ಕೆ ಉತ್ತಮ ರಸ್ತೆ ಸಂಪರ್ಕ ಕಲ್ಪಿಸುವುದು, ಚೌಡಾಪುರದಿಂದ ದೇವಲಗಾಣಗಾಪುರಕ್ಕೆ ಚೆನ್ನೈ–ಸೂರತ್ ಆರ್ಥಿಕ ಕಾರಿಡಾರ್ ಸಂಪರ್ಕ ರಸ್ತೆ ನಿರ್ಮಿಸುವುದು ಹಾಗೂ ಕಲಬುರಗಿಯಿಂದ ಅಟ್ನೂರು ಜಂಕ್ಷನ್‌ವರೆಗೆ ರಾಷ್ಟ್ರೀಯ ಹೆದ್ದಾರಿ–150ಇ ಅನ್ನು ನಾಲ್ಕು ಪಥದ ರಸ್ತೆಯಾಗಿ ಅಭಿವೃದ್ಧಿಪಡಿಸುವಂತೆ ಮನವಿ ಮಾಡಿದರು.
ಈ ಯೋಜನೆಗಳಿಂದ ಸಿರಸಗಿ, ಹಡಗಿಲ್, ಕೊಳೂರು, ಗೊಬ್ಬೂರು, ಚೌಡಾಪುರ ಸೇರಿದಂತೆ ಅನೇಕ ಗ್ರಾಮಗಳಿಗೆ ಉತ್ತಮ ರಸ್ತೆ ಸಂಪರ್ಕ ದೊರೆಯಲಿದ್ದು, ಪ್ರಾದೇಶಿಕ ಅಭಿವೃದ್ಧಿ, ಪ್ರವಾಸೋದ್ಯಮ, ವ್ಯಾಪಾರ ಹಾಗೂ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಉತ್ತೇಜನ ಸಿಗಲಿದೆ ಎಂದು ವಿವರಿಸಿದರು.
ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ–548ಬಿ ಮಾರ್ಗವನ್ನು ಅಗಲೀಕರಣ ಹಾಗೂ ಸುಧಾರಣೆಗೊಳಿಸಿ, ಮಹಾರಾಷ್ಟ್ರ ಗಡಿಯ ಮುರುಮುರಿಯಿಂದ ವಿಜಯಪುರ ಜಂಕ್ಷನ್‌ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರ ಆರಂಭಿಸುವಂತೆ ಆಗ್ರಹಿಸಿದರು. ಈ ಕಾಮಗಾರಿಯಿಂದ ಅಫಜಲಪುರ ಭಾಗದ ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಪಿಎಂ ಇ-ಡ್ರೈವ್ ಯೋಜನೆಯಡಿ ಈಗಾಗಲೇ ಮಂಜೂರಾಗಿರುವ ಎಲೆಕ್ಟ್ರಿಕ್ ಬಸ್‌ಗಳ ಜೊತೆಗೆ ಹೆಚ್ಚುವರಿ ಇ-ಬಸ್‌ಗಳನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಹಂಚಿಕೆ ಮಾಡುವಂತೆ ಮನವಿ ಮಾಡಿದರು. ಇದರಿಂದ ಪರಿಸರ ಸ್ನೇಹಿ ಸಾರ್ವಜನಿಕ ಸಾರಿಗೆ ಮತ್ತಷ್ಟು ಬಲಗೊಳ್ಳುವುದರ ಜೊತೆಗೆ ಪ್ರಯಾಣಿಕರಿಗೆ ಆಧುನಿಕ ಮತ್ತು ಗುಣಮಟ್ಟದ ಸಾರಿಗೆ ಸೇವೆ ದೊರೆಯಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ. ಪಾಟೀಲ್ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ್ ಪಾಟೀಲ್ ಉಪಸ್ಥಿತರಿದ್ದರು.



