ಸಣ್ಣೂರಿನಲ್ಲಿ ಉಚಿತ ಕ್ಯಾನ್ಸರ್ ಹಾಗೂ ಆರೋಗ್ಯ ತಪಾಸಣಾ ಶಿಬಿರ: 124 ಮಂದಿಗೆ ಪ್ರಯೋಜನ
ಗ್ರಾಮೀಣ ಜನರಲ್ಲಿ ಕ್ಯಾನ್ಸರ್ ಜಾಗೃತಿ ಮೂಡಿಸಿದ ಆರೋಗ್ಯ ಶಿಬಿರ; ತಜ್ಞ ವೈದ್ಯರಿಂದ ತಪಾಸಣೆ ಮತ್ತು ಸಲಹೆ

ಸೇವಾ ಸಂಗಮ ಡೆವಲಪ್‌ಮೆಂಟ್ ಸೊಸೈಟಿ ಹಾಗೂ ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಆಲ್ ಬ್ರದರ್ಸ್ ಆಸ್ಪತ್ರೆ ಮತ್ತು ಡಾನ್ ಬಾಸ್ಕೋ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಸಣ್ಣೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಕ್ಯಾನ್ಸರ್ ಹಾಗೂ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು.
ಗ್ರಾಮೀಣ ಜನರಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವುದು, ಆರಂಭಿಕ ಹಂತದಲ್ಲೇ ರೋಗವನ್ನು ಪತ್ತೆಹಚ್ಚುವುದು ಹಾಗೂ ಅಗತ್ಯ ವೈದ್ಯಕೀಯ ಸಲಹೆ ಮತ್ತು ಮಾರ್ಗದರ್ಶನ ನೀಡುವುದು ಶಿಬಿರದ ಮುಖ್ಯ ಉದ್ದೇಶವಾಗಿತ್ತು. ಶಿಬಿರದಲ್ಲಿ ತಜ್ಞ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಭಾಗವಹಿಸಿ ಕ್ಯಾನ್ಸರ್ ತಡೆಗಟ್ಟುವಿಕೆ, ಆರಂಭಿಕ ಲಕ್ಷಣಗಳು, ಆರೋಗ್ಯಕರ ಜೀವನಶೈಲಿ ಹಾಗೂ ಸಮಯಕ್ಕೆ ಸರಿಯಾದ ಚಿಕಿತ್ಸೆಯ ಮಹತ್ವದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಶಿಬಿರದಲ್ಲಿ 124 ಮಂದಿ ಗ್ರಾಮಸ್ಥರು ಉಚಿತ ತಪಾಸಣೆಯ ಸೌಲಭ್ಯ ಪಡೆದುಕೊಂಡರು. ತಪಾಸಣೆ ವೇಳೆ ಅನುಮಾನಾಸ್ಪದ ಲಕ್ಷಣಗಳು ಕಂಡುಬಂದವರಿಗೆ ಮುಂದಿನ ಚಿಕಿತ್ಸೆಗಾಗಿ ಸೂಕ್ತ ವೈದ್ಯಕೀಯ ಕೇಂದ್ರಗಳಿಗೆ ಭೇಟಿ ನೀಡುವಂತೆ ವೈದ್ಯರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗುರುಪಾದಪ್ಪ, ಉಪ ಕಾರ್ಯದರ್ಶಿ ಶಿವಮೂರ್ತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಜಯಶ್ರೀ, ಡಾನ್ ಬಾಸ್ಕೋ ಸಂಸ್ಥೆಯ ಮೊಬೈಲ್ ಕ್ಲಿನಿಕ್ ಕಾರ್ಯಕ್ರಮದ ವ್ಯವಸ್ಥಾಪಕಿ ಸಿಸ್ಟರ್ ಸೋಫಿಯಾ ಹಾಗೂ ದಂತ ವೈದ್ಯ ಡಾ. ಸೈಯದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶ್ರೀಮತಿ ನಂದಿನಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ವಿಜಯಲಕ್ಷ್ಮಿ ಸ್ವಾಗತಿಸಿದರು. ಶ್ರೀಮತಿ ದ್ರಾಕ್ಷಾಯಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಇಂದು ವಂದಿಸಿದರು.



