ಕೇಂದ್ರೀಯ ವಿಶ್ವವಿದ್ಯಾಲಯ ಪದವಿ ಕೋರ್ಸ್‌ಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ
ಜುಲೈ 16ರಿಂದ ಅರ್ಜಿ ಪ್ರಕ್ರಿಯೆ ಆರಂಭ; ಆಗಸ್ಟ್ 7 ಕೊನೆಯ ದಿನ – 2026-27ನೇ ಸಾಲಿನ ವಿವಿಧ ಪದವಿ ಕೋರ್ಸ್‌ಗಳಿಗೆ ಪ್ರವೇಶ

ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೇ) 2026-27ನೇ ಶೈಕ್ಷಣಿಕ ಸಾಲಿನ ವಿವಿಧ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ ಎಂದು ಕುಲಸಚಿವ ಡಾ. ಆರ್.ಆರ್. ಬಿರಾದಾರ್ ತಿಳಿಸಿದ್ದಾರೆ.
ಜುಲೈ 16ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಆಗಸ್ಟ್ 7 ಕೊನೆಯ ದಿನವಾಗಿದೆ. ವಿಶ್ವವಿದ್ಯಾಲಯದ ಆರು ವಿಭಾಗಗಳಲ್ಲಿ ಕಲೆ, ಮಾನವಿಕ, ಸಮಾಜ ವಿಜ್ಞಾನ, ನಿರ್ವಹಣೆ, ವಿಜ್ಞಾನ ಹಾಗೂ ಇಂಜಿನಿಯರಿಂಗ್ ಕ್ಷೇತ್ರಗಳ ವಿವಿಧ ಪದವಿ, ಸ್ನಾತಕೋತ್ತರ ಹಾಗೂ ಸಂಶೋಧನಾ ಶಿಕ್ಷಣವನ್ನು ನೀಡಲಾಗುತ್ತಿದೆ.
ರಾಷ್ಟ್ರೀಯ ಶಿಕ್ಷಣ ನೀತಿ–2020 (NEP-2020) ಅನುಸಾರ ಬಹುಶಾಖಾ, ಕೌಶಲ್ಯಾಧಾರಿತ ಹಾಗೂ ಸಂಶೋಧನಾ ಆಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ಒದಗಿಸುವ ಉದ್ದೇಶದಿಂದ ವಿವಿಧ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭಿಸಿದೆ.
ಈ ಶೈಕ್ಷಣಿಕ ವರ್ಷದಿಂದ ಸ್ನಾತಕ ಪ್ರದರ್ಶನ ಕಲೆ (ಹಿಂದುಸ್ತಾನಿ ಸಂಗೀತ) ಎಂಬ ಹೊಸ ಕೋರ್ಸ್‌ನ್ನು ಕೂಡ ಆರಂಭಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಾವು ಆಯ್ಕೆಮಾಡುವ ಕೋರ್ಸ್‌ಗೆ ಅಗತ್ಯವಿರುವ ಅರ್ಹತೆಯನ್ನು ಮುಂಚಿತವಾಗಿ ಪರಿಶೀಲಿಸಿಕೊಳ್ಳಬೇಕು. ಎಲ್ಲಾ ಪದವಿ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಕಡ್ಡಾಯವಾಗಿ ಆನ್‌ಲೈನ್ ಮೂಲಕವೇ ನೋಂದಣಿ ಮಾಡಿಕೊಳ್ಳಬೇಕಾಗಿದೆ.
ಪ್ರವೇಶ ಪ್ರಕ್ರಿಯೆ, ಅರ್ಹತೆ, ಅಗತ್ಯ ದಾಖಲೆಗಳು ಹಾಗೂ ಇತರ ಮಾಹಿತಿಗಾಗಿ ಅಭ್ಯರ್ಥಿಗಳು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.



