
ಲಡಾಖ್ನ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಹಾಗೂ ಉಪವಾಸ ನಿರತ ವಿದ್ಯಾರ್ಥಿಗಳ ರಕ್ಷಣೆಗೆ ಆಗ್ರಹಿಸಿ ಡಿವೈಎಫ್ಐ (DYFI) ಮತ್ತು ಎಸ್ಎಫ್ಐ (SFI) ನೇತೃತ್ವದಲ್ಲಿ ಶುಕ್ರವಾರ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ರಾಷ್ಟ್ರಪತಿಗಳು ತಕ್ಷಣ ಮಧ್ಯಸ್ಥಿಕೆ ವಹಿಸಿ ಉಪವಾಸ ನಿರತರ ಜೀವ ರಕ್ಷಣೆ ಹಾಗೂ ವಿದ್ಯಾರ್ಥಿಗಳ ನ್ಯಾಯಸಮ್ಮತ ಬೇಡಿಕೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಸೋನಂ ವಾಂಗ್ಚುಕ್ ಹಾಗೂ ವಿದ್ಯಾರ್ಥಿಗಳು ಹಲವು ದಿನಗಳಿಂದ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಸರ್ಕಾರ ಸೂಕ್ತ ಸ್ಪಂದನೆ ನೀಡಬೇಕೆಂದು ಆಗ್ರಹಿಸಿದರು. ಪರೀಕ್ಷಾ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪಗಳು ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸ್ವತಂತ್ರ ಹಾಗೂ ಪಾರದರ್ಶಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪರೀಕ್ಷಾ ಅಕ್ರಮಗಳಿಗೆ ಕಾರಣರಾದ ಅಧಿಕಾರಿಗಳು ಮತ್ತು ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಪರೀಕ್ಷಾ ಅವ್ಯವಸ್ಥೆಯಿಂದ ಹಾನಿಗೊಳಗಾದ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳಿಗೆ ನ್ಯಾಯಯುತ ಪರಿಹಾರ, ಅಗತ್ಯ ನೆರವು ಮತ್ತು ಬೆಂಬಲ ಒದಗಿಸಬೇಕು ಎಂದು ಮನವಿಯಲ್ಲಿ ತಿಳಿಸಿದರು.
ಉಪವಾಸ ನಿರತ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ನಿರಂತರ ವೈದ್ಯಕೀಯ ಮೇಲ್ವಿಚಾರಣೆ ನಡೆಸಿ, ಅವರೊಂದಿಗೆ ಸರ್ಕಾರ ನೇರ ಸಂವಾದ ಆರಂಭಿಸಬೇಕು. ಪ್ರತಿಭಟನೆಯಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ಹಾಗೂ ಸಂಘಟನೆಗಳ ವಿರುದ್ಧ ಯಾವುದೇ ರೀತಿಯ ಪ್ರತೀಕಾರಾತ್ಮಕ ಕ್ರಮ ಕೈಗೊಳ್ಳಬಾರದು ಎಂದು ಆಗ್ರಹಿಸಿದರು.
ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಸ್ವತಂತ್ರ ರಾಷ್ಟ್ರೀಯ ಕಾರ್ಯವಿಧಾನ ರೂಪಿಸಿ, ಭವಿಷ್ಯದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಲವಿತ್ರಾ ವಸ್ತ್ರದ್, ಇಮಾಮಸಾಬ್, ನಾಗರಾಜ್, ಅಜಯ್, ಅಂಕಿತಾ, ಪ್ರೇಮ್, ಅನಿತಾ, ತಾಯಣ್ಣ ಸೇರಿದಂತೆ ಡಿವೈಎಫ್ಐ ಮತ್ತು ಎಸ್ಎಫ್ಐ ಸಂಘಟನೆಗಳ ಮುಖಂಡರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.



