ಸಿಇಐಆರ್ ಪೋರ್ಟಲ್ ನೆರವಿನಿಂದ ಕಳೆದುಹೋದ ಮೊಬೈಲ್‌ಗಳ ಪತ್ತೆ; ವಾರಸುದಾರರಿಗೆ ಹಸ್ತಾಂತರ
ಭಾಲ್ಕಿ ನಗರ ಪೊಲೀಸರ ಜನಸ್ನೇಹಿ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ; ಕಳೆದುಹೋದ ಮೊಬೈಲ್‌ಗಳನ್ನು ಪತ್ತೆಹಚ್ಚಿ ಮಾಲೀಕರಿಗೆ ಮರಳಿಕೆ

ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್ ಫೋನ್‌ಗಳನ್ನು ಅತ್ಯಾಧುನಿಕ ಸಿಇಐಆರ್ (CEIR) ಪೋರ್ಟಲ್ ನೆರವಿನಿಂದ ಪತ್ತೆಹಚ್ಚಿ, ಪರಿಶೀಲನೆಯ ಬಳಿಕ ನೈಜ ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಭಾಲ್ಕಿ ನಗರ ಪೊಲೀಸರು ಜನಸ್ನೇಹಿ ಕಾರ್ಯಕ್ಕೆ ಮೆಚ್ಚುಗೆ ಪಡೆದಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರ ಮಾರ್ಗದರ್ಶನದಲ್ಲಿ ಹಾಗೂ ಭಾಲ್ಕಿ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಅಮರೇಶ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ಯಶಸ್ವಿಯಾಗಿ ನಡೆಯಿತು. ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಿಇಐಆರ್ ಪೋರ್ಟಲ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್‌ಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು.
ಪತ್ತೆಯಾದ ಮೊಬೈಲ್‌ಗಳನ್ನು ಸಂಬಂಧಿತ ದಾಖಲೆಗಳ ಪರಿಶೀಲನೆಯ ನಂತರ ನೈಜ ಮಾಲೀಕರಿಗೆ ಹಸ್ತಾಂತರಿಸಲಾಯಿತು. ತಮ್ಮ ಅಮೂಲ್ಯ ಮೊಬೈಲ್‌ಗಳನ್ನು ಮರಳಿ ಪಡೆದ ಸಾರ್ವಜನಿಕರು ಭಾಲ್ಕಿ ನಗರ ಪೊಲೀಸ್ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದರು.
ಈ ಕಾರ್ಯಾಚರಣೆಯಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸೇವೆಯನ್ನು ಜಿಲ್ಲಾ ಪೊಲೀಸ್ ಇಲಾಖೆ ಶ್ಲಾಘಿಸಿದ್ದು, ಸಾರ್ವಜನಿಕರ ಆಸ್ತಿಯನ್ನು ಸುರಕ್ಷಿತವಾಗಿ ಪತ್ತೆಹಚ್ಚಿ ಮರಳಿಸುವಲ್ಲಿ ಪೊಲೀಸ್ ಇಲಾಖೆಯ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಮೊಬೈಲ್ ಕಳೆದುಹೋದರೆ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡುವುದು ಅಥವಾ ಸಿಇಐಆರ್ ಪೋರ್ಟಲ್ ಮೂಲಕ ಮಾಹಿತಿ ದಾಖಲಿಸುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.



