ಹೊಲದಲ್ಲಿದ್ದ ಜಾನುವಾರು ಕಳವು ಪ್ರಕರಣ ಭೇದ: ಐವರು ಆರೋಪಿಗಳ ಬಂಧನ
₹9.15 ಲಕ್ಷ ಮೌಲ್ಯದ ಜಾನುವಾರು, ನಗದು ವಶಕ್ಕೆ; ಅಫಜಲಪುರ ಪೊಲೀಸರ ಯಶಸ್ವಿ ಕಾರ್ಯಾಚರಣೆ

ಜಿಲ್ಲೆಯ ಅಫಜಲಪುರ ಪಟ್ಟಣದ ಅಂಬಿಗರ ಚೌಡಯ್ಯ ನಗರದ ನಿವಾಸಿ ಸಿದ್ದಪ್ಪ ಚಂದಪ್ಪ ಮಾಕೇರಿ ಅವರ ಹೊಲದಲ್ಲಿ ಕಟ್ಟಿದ್ದ ಜಾನುವಾರು ಕಳವು ಪ್ರಕರಣವನ್ನು ಭೇದಿಸಿರುವ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ.
ನಗರದ ಪೊಲೀಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತರನ್ನು ಆಳಂದ ತಾಲೂಕಿನ ಅಂಬೇವಾಡ ಗ್ರಾಮದ ಖಾಜಪ್ಪ ಮೂಕನೂರ (38), ರಮೇಶ್ ಬುರಾಣಪುರೆ (27), ಮಹಿಬೂಬ್ ದೊಡ್ಡೆನ್ನವರ (27) ಹಾಗೂ ದೇವರಹಿಪ್ಪರಗಿ ತಾಲೂಕಿನ ಮೊಳಸಾವಳಗಿ ಗ್ರಾಮದ ಮಲ್ಲಿಕಾರ್ಜುನ ಅಲಿಯಾಸ್ ಸಂಜು ತಳವಾರ (22) ಮತ್ತು ಶಿವಶರಣ ಅಲಿಯಾಸ್ ಶಶಿಕುಮಾರ ತಳವಾರ (23) ಎಂದು ಗುರುತಿಸಲಾಗಿದೆ ಎಂದು ತಿಳಿಸಿದರು.
ಡಿವೈಎಸ್‌ಪಿ ತಮ್ಮರಾಯ ಪಾಟೀಲ್ ಮಾರ್ಗದರ್ಶನದಲ್ಲಿ ಸಿಪಿಐ ಲಕ್ಷಣ್ ಆರ್. ಮಸಗುಪ್ಪಿ, ಪ್ರಭಾರ ಪಿಎಸ್‌ಐ ವಾತ್ಸಲ್ಯ ಹಾಗೂ ಸಿಬ್ಬಂದಿಯ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಬಂಧಿತರಿಂದ ಎರಡು ಖಿಲಾರಿ ಎತ್ತುಗಳು, ಒಂದು ಜರ್ಸಿ ಹಸು ಮಾರಾಟದಿಂದ ಬಂದ ₹55 ಸಾವಿರ ನಗದು, ಸುಮಾರು ₹1.30 ಲಕ್ಷ ಮೌಲ್ಯದ ಒಂದು ಖಿಲಾರಿ ಎತ್ತು, ಮೂರು ಖಿಲಾರಿ ಎತ್ತುಗಳು, ಮತ್ತೊಂದು ಹಸು ಮಾರಾಟದಿಂದ ಬಂದ ₹50 ಸಾವಿರ, ಇನ್ನೆರಡು ಹಸುಗಳ ಮಾರಾಟದಿಂದ ಬಂದ ₹50 ಸಾವಿರ ಸೇರಿದಂತೆ ಒಟ್ಟು ₹9.15 ಲಕ್ಷ ಮೌಲ್ಯದ ಜಾನುವಾರು ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣವನ್ನು ಭೇದಿಸಿದ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿದರು. ಸುದ್ದಿಗೋಷ್ಠಿಯಲ್ಲಿ ಡಿವೈಎಸ್‌ಪಿ ತಮ್ಮರಾಯ ಪಾಟೀಲ್, ಸಿಪಿಐ ಲಕ್ಷಣ್ ಆರ್. ಮಸಗುಪ್ಪಿ, ಪ್ರಭಾರ ಪಿಎಸ್‌ಐ ವಾತ್ಸಲ್ಯ ಸೇರಿದಂತೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.



