ನಿಂಬರ್ಗಾ ಪೊಲೀಸರ ಕಾರ್ಯಾಚರಣೆ: ನಾಲ್ವರು ಕಳ್ಳರ ಬಂಧನ
ಮೂರು ಕಳವು ಪ್ರಕರಣಗಳ ಭೇದಿಸಿದ ಪೊಲೀಸರು; ₹5.90 ಲಕ್ಷ ಮೌಲ್ಯದ ನಗದು, ಚಿನ್ನ ಹಾಗೂ ವಾಹನ ವಶಕ್ಕೆ

ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮೂರು ಪ್ರತ್ಯೇಕ ಕಳವು ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ನಗದು, ಚಿನ್ನಾಭರಣ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ.
ನಗರದ ಪೊಲೀಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತರನ್ನು ಸೋಲಾಪುರ ಜಿಲ್ಲೆಯ ದತ್ತನಗರದ ಸಿದ್ದಪ್ಪ ಕಾಲೆ (50), ಮಾಢಾ ತಾಲೂಕಿನ ಕುರ್ಡವಾಡಿಯ ಗೋವಿಂದ ಭೋಸಲೆ (40) ಹಾಗೂ ಕಲಬುರಗಿಯ ಆಸಿಫ್ ಖುರೇಷಿ (25) ಮತ್ತು ತೌಫಿಕ್ ಖುರೇಷಿ (30) ಎಂದು ಗುರುತಿಸಲಾಗಿದೆ ಎಂದರು.
ಕುಡಕಿ ಗ್ರಾಮದಲ್ಲಿ ಮಾಳಪ್ಪ ಸನ್ನೇಸಿ ಅವರ ಮನೆಯಲ್ಲಿ ಕಳವು ನಡೆಸಿ ₹43,500 ಮೌಲ್ಯದ ಚಿನ್ನಾಭರಣ ಹಾಗೂ ನಗದು ಕದ್ದಿದ್ದರು. ಇದೇ ಗ್ರಾಮದ ವಿಜಯಕುಮಾರ್ ಅವರ ಮನೆಯಲ್ಲಿ ₹1.46 ಲಕ್ಷ ಮೌಲ್ಯದ ಚಿನ್ನಾಭರಣ ದೋಚಲಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಭೂಸನೂರ ಗ್ರಾಮದ ಪ್ರಮೋದ್ ಕುಲಕರ್ಣಿ ಅವರ ಜಮೀನಿನ ಶೆಡ್‌ನಿಂದ ನಾಲ್ಕು ಎಮ್ಮೆ ಹಾಗೂ ಒಂದು ಆಕೆಯನ್ನು ಕಳವು ಮಾಡಲಾಗಿದ್ದು, ಅವುಗಳ ಮೌಲ್ಯ ಸುಮಾರು ₹2.20 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮೂರು ಪ್ರಕರಣಗಳ ತನಿಖೆ ನಡೆಸಿದ ವಿಶೇಷ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತ ಸಿದ್ದಪ್ಪ ಹಾಗೂ ಗೋವಿಂದರಿಂದ ₹30 ಸಾವಿರ ನಗದು ಮತ್ತು 10 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಇದೇ ರೀತಿ ಆಸಿಫ್ ಮತ್ತು ತೌಫಿಕ್ ಖುರೇಷಿ ಅವರಿಂದ ₹1.40 ಲಕ್ಷ ನಗದು ಹಾಗೂ ₹4.50 ಲಕ್ಷ ಮೌಲ್ಯದ ಮಹೀಂದ್ರಾ ಕಂಪನಿಯ ಬೊಲೆರೊ ಪಿಕಪ್ ವಾಹನ ಸೇರಿದಂತೆ ಒಟ್ಟು ₹5.90 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಡಿವೈಎಸ್‌ಪಿ ತಮ್ಮರಾಯ ಪಾಟೀಲ್ ನೇತೃತ್ವದಲ್ಲಿ ಸಿಪಿಐ ಜಗದೀಶ್, ಪಿಎಸ್‌ಐ ಇಂದುವತಿ, ಶಿವಾನಂದ ಹಾಗೂ ಸಿಬ್ಬಂದಿಯ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಪ್ರಕರಣವನ್ನು ಭೇದಿಸಿದ ಪೊಲೀಸ್ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನಂದಿಸಿದರು. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಮೇಘಣ್ಣನವರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.



