ಕಲಬುರಗಿ ಜೈಲಿನಿಂದ ಪರಾರಿಯಾಗಿದ್ದ ಕೈದಿ ಗುಂಡೇಟಿಗೆ ಸಿಲುಕಿ ಸೆರೆ; ಇಬ್ಬರು ಪೊಲೀಸರಿಗೆ ಗಾಯ
ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಕೈದಿಗೆ ಪ್ರತಿಯಾಗಿ ಗುಂಡು; ಇನ್ನಿಬ್ಬರು ಪರಾರಿಗಳಿಗಾಗಿ ಶೋಧ ಮುಂದುವರಿಕೆ

ಕಲಬುರಗಿ, ಜುಲೈ 15: ಕಲಬುರಗಿ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಮೂವರು ಕೈದಿಗಳ ಪೈಕಿ ಸಂತಪುರ ಗ್ರಾಮದ ಸಂತೋಷ ತಂದೆ ಬಸಪ್ಪ ಮೇತ್ರೆ (24) ಎಂಬಾತನನ್ನು ಪೊಲೀಸರು ಗುಂಡೇಟು ಹೊಡೆದು ಬಂಧಿಸಿದ್ದಾರೆ. ಈ ವೇಳೆ ಇಬ್ಬರು ಪೊಲೀಸರಿಗೆ ಗಾಯಗಳಾಗಿದ್ದು, ಗಾಯಾಳುಗಳು ಹಾಗೂ ಆರೋಪಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಅವರು ನೀಡಿದ ಮಾಹಿತಿಯಂತೆ, ಪರಾರಿಯಾಗಿದ್ದ ಕೈದಿಗಳ ಪತ್ತೆಗೆ ಕಲಬುರಗಿ ನಗರ, ಜಿಲ್ಲಾ ಹಾಗೂ ಬೀದರ್ ಪೊಲೀಸ್ ತಂಡಗಳು ವಿಶೇಷ ಕಾರ್ಯಾಚರಣೆ ನಡೆಸಿದ್ದವು. ಈ ವೇಳೆ ಕಪನೂರು ಕೈಗಾರಿಕಾ ಪ್ರದೇಶದಲ್ಲಿ ಸಂತೋಷ ಇರುವ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು.
ಬಂಧಿಸಲು ತೆರಳಿದ ಪೊಲೀಸರ ಮೇಲೆ ಸಂತೋಷ ಮಾರಕಾಸ್ತ್ರದಿಂದ ಹಲ್ಲೆ ನಡೆಸಲು ಯತ್ನಿಸಿದನು. ಆತ್ಮರಕ್ಷಣೆಗಾಗಿ ಫರಹತಾಬಾದ್ ಪೊಲೀಸ್ ಠಾಣೆಯ ಪಿಐ ಹುಸೇನ್ ಭಾಷಾ ಅವರು ಎಚ್ಚರಿಕೆ ಗುಂಡು ಹಾರಿಸಿದರೂ ಆರೋಪಿ ದಾಳಿ ಮುಂದುವರಿಸಿದ್ದರಿಂದ, ಆತನ ಬಲಗಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಯಿತು.
ಘಟನೆಯಲ್ಲಿ ಫರಹತಾಬಾದ್ ಠಾಣೆಯ ಪೊಲೀಸ್ ಸಿಬ್ಬಂದಿ ಕಲ್ಯಾಣಕುಮಾರ್ ಹಾಗೂ ವಿಶ್ವವಿದ್ಯಾಲಯ ಠಾಣೆಯ ಪ್ರಕಾಶ್ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಸಂತೋಷನಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನಿಬ್ಬರು ಪರಾರಿಯಾಗಿರುವ ಕೈದಿಗಳಾದ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಇಸ್ಲಾಂಪುರದ ಮಸ್ತಾನ್ ಅಲಿಯಾಸ್ ಮಾಷಾ (31) ಹಾಗೂ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸಾಗರ್ (30) ಅವರ ಪತ್ತೆಗೆ ಪೊಲೀಸರು ತೀವ್ರ ಶೋಧ ಮುಂದುವರಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಮೂವರು ಕೈದಿಗಳು ಜೈಲಿನ ಐದನೇ ಬ್ಯಾರಕ್‌ನ ಶೌಚಾಲಯದ ಕಿಟಕಿಯ ಕಬ್ಬಿಣದ ರಾಡ್ ಕತ್ತರಿಸಿ ಹೊರಬಂದಿದ್ದರು. ಬಳಿಕ ಕಟ್ಟಡ ಕಾಮಗಾರಿಗೆ ಬಳಸುವ ಏಣಿಯ ಮಾದರಿಯ ವಸ್ತುವಿನ ಸಹಾಯದಿಂದ ಜೈಲಿನ ಗೋಡೆ ಹತ್ತಿ ಜುಲೈ 14ರ ಮುಂಜಾನೆ ಸುಮಾರು 4.35 ರಿಂದ 4.40ರ ನಡುವೆ ಪರಾರಿಯಾಗಿದ್ದರು. ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



