ಜಿಲ್ಲಾಸುದ್ದಿ

ಕ್ಷೇಮಾಭಿವೃದ್ಧಿ ನೌಕರರಿಗೂ ಪಿಂಚಣಿ ಸೌಲಭ್ಯ ವಿಸ್ತರಣೆಗೆ ಆಗ್ರಹ

ಒಪಿಎಸ್ ಮಾದರಿಯಲ್ಲಿ ಅನುಷ್ಠಾನಕ್ಕೆ ಒತ್ತಾಯಿಸಿ ಬೃಹತ್ ಪ್ರತಿಭಟನಾ ರ‍್ಯಾಲಿ

ಕಲಬುರಗಿ, ಸೆ.22: ನಿವೃತ್ತಿಯ ನಂತರ ಎಲ್ಲ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ಪಿಂಚಣಿ ಸೌಲಭ್ಯವನ್ನು ಕ್ಷೇಮಾಭಿವೃದ್ಧಿ ನೌಕರರಿಗೂ ವಿಸ್ತರಿಸಬೇಕು ಹಾಗೂ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಮಾದರಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಿತು.

ಶ್ರಮಜೀವಿಗಳ ವೇದಿಕೆಯ ರಾಜ್ಯಾಧ್ಯಕ್ಷ ಚಂದ್ರಶೇಖರ್ ಎಸ್. ಹಿರೇಮಠ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ರ‍್ಯಾಲಿಯು ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿತು.

ಪ್ರತಿಭಟನೆಯಲ್ಲಿ ದಿನಗೂಲಿ ನೌಕರರಾಗಿದ್ದ ಪ್ರಮುಖರಾದ ಮಹ್ಮದ್ ರಹೀಮ್, ಈರಣ್ಣ ಆಳಂದ, ಅಣವೀರಯ್ಯ ಸ್ವಾಮಿ, ದೇವೇಂದ್ರಪ್ಪ ಚಿಂಚೋಳಿ, ಮಾರುತಿ ಚಿಂಚೋಳಿ, ಹನುಮಂತಪ್ಪ ಒಂಕಿ, ಮಾನಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ಕುರಿತು ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಬೇಡಿಕೆ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕ್ಷೇಮಾಭಿವೃದ್ಧಿ ನೌಕರರಿಗೆ ಎಲ್ಲ ಸೌಲಭ್ಯಗಳನ್ನು ವಿಸ್ತರಿಸುವಂತೆ ಕಲಬುರಗಿ ವಿಭಾಗೀಯ ಪೀಠವೂ ಆದೇಶ ನೀಡಿದ್ದರೂ, ಅದರ ವಿರುದ್ಧ ಮೇಲ್ಮನವಿ ಸಲ್ಲಿಸುವ ಮೂಲಕ ಸರ್ಕಾರ ಅನಗತ್ಯವಾಗಿ ವಿಳಂಬ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅನೇಕ ನೌಕರರು ನಿವೃತ್ತಿಯ ಅಂಚಿನಲ್ಲಿದ್ದು, ಹಲವರು ಈಗಾಗಲೇ ನಿವೃತ್ತರಾಗಿದ್ದಾರೆ. ಆದರೆ ಪಿಂಚಣಿ ಸೌಲಭ್ಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ತಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಸಂಘವು ಬೀದಿಗಿಳಿದು ಹೋರಾಟ ನಡೆಸುತ್ತಿದೆ ಎಂದು ತಿಳಿಸಿದರು.

ಎಲ್ಲ ಸರ್ಕಾರಿ ನೌಕರರಿಗೆ ನೀಡುತ್ತಿರುವಂತೆ ಕ್ಷೇಮಾಭಿವೃದ್ಧಿ ನೌಕರರಿಗೂ ಶೇ 100ರಷ್ಟು ಎಚ್‌ಆರ್‌ಎ, ಡಿಎ ಸೌಲಭ್ಯಗಳನ್ನು ವಿಸ್ತರಿಸಿ, ಗಳಿಕೆ ರಜೆ ಮಂಜೂರು ಮಾಡಬೇಕು ಹಾಗೂ ಪಿಂಚಣಿ ಸೌಲಭ್ಯ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Related Articles

Leave a Reply

Your email address will not be published. Required fields are marked *

Back to top button