ಆಷಾಢ ವಾರಕರಿ ಯಾತ್ರೆ: ಕಲಬುರಗಿ–ಮೀರಜ್ ನಡುವೆ 14 ವಿಶೇಷ ರೈಲುಗಳ ಸಂಚಾರ
ಜುಲೈ 23ರಿಂದ 29ರವರೆಗೆ ಪಂಢರಪುರ ಮಾರ್ಗವಾಗಿ ಹೆಚ್ಚುವರಿ ರೈಲು ಸೇವೆ; ಯಾತ್ರಿಕರಿಗೆ ದಕ್ಷಿಣ ಮಧ್ಯ ರೈಲ್ವೆಯ ಸೌಲಭ್ಯ

ಕಲಬುರಗಿ, ಜು.15: ಪಂಢರಪುರದ ಆಷಾಢ ವಾರಕರಿ ಯಾತ್ರೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಸೊಲ್ಲಾಪುರ ರೈಲ್ವೆ ವಿಭಾಗವು ಕಲಬುರಗಿ–ಮೀರಜ್ ನಡುವೆ ಪಂಢರಪುರ ಮಾರ್ಗವಾಗಿ 14 ವಿಶೇಷ ರೈಲುಗಳ ಸಂಚಾರವನ್ನು ಘೋಷಿಸಿದೆ. ಒಟ್ಟು 58 ವಿಶೇಷ ರೈಲುಗಳ ಕಾರ್ಯಾಚರಣೆಯ ಭಾಗವಾಗಿ ಈ ಸೇವೆ ಕಲಬುರಗಿ ಸೇರಿದಂತೆ ಕರ್ನಾಟಕದ ಯಾತ್ರಿಕರಿಗೆ ಅನುಕೂಲ ಕಲ್ಪಿಸಲಿದೆ ಎಂದು ಸೊಲ್ಲಾಪುರ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿದೆ.
ರೈಲು ಸಂಖ್ಯೆ 01107 ಕಾಯ್ದಿರಿಸದ ವಿಶೇಷ ರೈಲು ಜುಲೈ 23ರಿಂದ 29ರವರೆಗೆ ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಮೀರಜ್‌ನಿಂದ ಹೊರಟು ಮಧ್ಯಾಹ್ನ 1.30ಕ್ಕೆ ಕಲಬುರಗಿ ತಲುಪಲಿದೆ. ಈ ರೈಲು ಪಂಢರಪುರಕ್ಕೆ ಬೆಳಿಗ್ಗೆ 7.40ಕ್ಕೆ ಆಗಮಿಸಿ 8.40ಕ್ಕೆ ನಿರ್ಗಮಿಸಲಿದೆ.
ರೈಲು ಸಂಖ್ಯೆ 01108 ಕಾಯ್ದಿರಿಸದ ವಿಶೇಷ ರೈಲು ಇದೇ ಅವಧಿಯಲ್ಲಿ ಪ್ರತಿದಿನ ಮಧ್ಯಾಹ್ನ 3.30ಕ್ಕೆ ಕಲಬುರಗಿಯಿಂದ ಹೊರಟು ರಾತ್ರಿ 11.50ಕ್ಕೆ ಮೀರಜ್ ತಲುಪಲಿದೆ. ಈ ರೈಲು ಪಂಢರಪುರಕ್ಕೆ ರಾತ್ರಿ 8.55ಕ್ಕೆ ಆಗಮಿಸಿ 9 ಗಂಟೆಗೆ ಹೊರಡಲಿದೆ.
ಈ ವಿಶೇಷ ರೈಲುಗಳು ಆರಗ್, ಬೆಳಂಕಿ, ಸಲಗರೆ, ಕವಠೆ ಮಹಾಂಕಾಳ, ಲಂಗರಪೇಟ್, ಧಲಗಾಂವ್, ಜತ್ ರೋಡ್, ಮ್ಹಾಸೋಬಾ, ಡೊಂಗರಗಾಂವ್, ಜವಲೆ, ವಾಸುದ್, ಸಂಗೋಳ, ಪಂಢರಪುರ, ಮೊಡ್ಲಿಂಬ್, ಕುರ್ಡುವಾಡಿ, ಮಾಧಾ, ಮೋಹೋಲ್, ಸೊಲ್ಲಾಪುರ, ಅಕ್ಕಲಕೋಟ್ ರಸ್ತೆ, ದುಧನಿ ಹಾಗೂ ಗಾಣಗಾಪುರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ.
ಪ್ರತಿ ರೈಲಿನಲ್ಲಿ 14 ಸಾಮಾನ್ಯ ದ್ವಿತೀಯ ದರ್ಜೆಯ ಬೋಗಿಗಳು ಹಾಗೂ 2 ಲಗೇಜ್-ಕಮ್-ಗಾರ್ಡ್ ಬ್ರೇಕ್ ವ್ಯಾನ್‌ಗಳನ್ನು ಒಳಗೊಂಡಿರುತ್ತವೆ. ಕಾಯ್ದಿರಿಸದ ಪ್ರಯಾಣಿಕರು ನಿಲ್ದಾಣಗಳ ಬುಕ್ಕಿಂಗ್ ಕೌಂಟರ್‌ಗಳು ಅಥವಾ ರೈಲ್‌ಒನ್ (RailOne) ಮೊಬೈಲ್ ಅಪ್ಲಿಕೇಶನ್ ಮೂಲಕ ಟಿಕೆಟ್ ಪಡೆಯಬಹುದಾಗಿದೆ.
ರೈಲ್ವೆ ಇಲಾಖೆ ಮಾನ್ಯ ಟಿಕೆಟ್‌ನೊಂದಿಗೆ ಪ್ರಯಾಣಿಸುವಂತೆ ಪ್ರಯಾಣಿಕರಿಗೆ ಮನವಿ ಮಾಡಿದ್ದು, ರೈಲುಗಳ ಸಂಪೂರ್ಣ ವೇಳಾಪಟ್ಟಿಯನ್ನು NTES ಅಥವಾ ಭಾರತೀಯ ರೈಲ್ವೆಯ ವಿಚಾರಣೆ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದಾಗಿದೆ.



