ಅರ್ಜೆಂಟಿನಾ-ಇಂಗ್ಲೆಂಡ್ ಸೆಮಿಫೈನಲ್‌ಗೆ ಮೆಸ್ಸಿಗೆ ಪರಿಚಿತ ರೆಫರಿ; ಇಸ್ಮಾಯಿಲ್ ಎಲ್ಫಾತ್ ನೇಮಕ ಚರ್ಚೆಗೆ ಕಾರಣ
ಎಲ್ಫಾತ್ ತೀರ್ಪುಗಾರಿಕೆಯಲ್ಲಿ ಮೆಸ್ಸಿ ಸೋತಿಲ್ಲ; ಫಿಫಾ ನಿರ್ಧಾರಕ್ಕೆ ಕೆಲ ಇಂಗ್ಲೆಂಡ್ ಅಭಿಮಾನಿಗಳ ಆಕ್ಷೇಪ

ಫಿಫಾ ವಿಶ್ವಕಪ್ 2026ರ ಸೆಮಿಫೈನಲ್‌ನಲ್ಲಿ ಅರ್ಜೆಂಟಿನಾ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಲಿರುವ ಮಹತ್ವದ ಪಂದ್ಯಕ್ಕೆ ಫಿಫಾ ಮೊರೊಕ್ಕೊ ಮೂಲದ ಅಮೆರಿಕದ ತೀರ್ಪುಗಾರ ಇಸ್ಮಾಯಿಲ್ ಎಲ್ಫಾತ್ ಅವರನ್ನು ನೇಮಿಸಿದೆ. ಈ ನೇಮಕಾತಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಅರ್ಜೆಂಟಿನಾ ನಾಯಕ ಲಿಯೊನೆಲ್ ಮೆಸ್ಸಿ, ಎಲ್ಫಾತ್ ತೀರ್ಪುಗಾರಿಕೆಯಲ್ಲಿ ಆಡಿರುವ ಐದು ಪಂದ್ಯಗಳಲ್ಲೂ ಸೋಲು ಕಂಡಿಲ್ಲ. ಮುಖ್ಯ ತೀರ್ಪುಗಾರರಾಗಿಯೂ, ಇತರ ಅಧಿಕೃತ ಪಾತ್ರಗಳಲ್ಲಿಯೂ ಎಲ್ಫಾತ್ ಇದ್ದ ಎಲ್ಲಾ ಪಂದ್ಯಗಳಲ್ಲಿ ಅರ್ಜೆಂಟಿನಾ ಜಯ ಸಾಧಿಸಿದೆ. ಈ ಕಾರಣದಿಂದ ಕೆಲ ಇಂಗ್ಲೆಂಡ್ ಅಭಿಮಾನಿಗಳು ಫಿಫಾ ನಿರ್ಧಾರದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಆದರೆ ಎಲ್ಫಾತ್ ಅವರ ತೀರ್ಪುಗಾರಿಕೆ ಪಂದ್ಯದ ಫಲಿತಾಂಶದ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ.
44 ವರ್ಷದ ಇಸ್ಮಾಯಿಲ್ ಎಲ್ಫಾತ್ ಅವರು ವಿಶ್ವಕಪ್ 2026ರಲ್ಲಿ ನಾಲ್ಕನೇ ಪಂದ್ಯಕ್ಕೆ ತೀರ್ಪುಗಾರರಾಗಲಿದ್ದಾರೆ. ಈ ಮೊದಲು ನಾರ್ವೆ–ಬ್ರೆಜಿಲ್, ಜಪಾನ್–ನೆದರ್ಲ್ಯಾಂಡ್ಸ್ ಹಾಗೂ ಸ್ಪೇನ್–ಉರುಗ್ವೆ ಪಂದ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ಪಂದ್ಯದಲ್ಲಿ ಅವರಿಗೆ ಅಮೆರಿಕದ ಕೋರಿ ಪಾರ್ಕರ್ ಮತ್ತು ಕೈಲ್ ಅಟ್ಕಿನ್ಸ್ ಸಹಾಯಕ ತೀರ್ಪುಗಾರರಾಗಿರಲಿದ್ದಾರೆ.
ಎಲ್ಫಾತ್ ಅವರು 2022ರ ಕತಾರ್ ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟಿನಾ ಮತ್ತು ಫ್ರಾನ್ಸ್ ನಡುವಿನ ರೋಚಕ ಪಂದ್ಯದಲ್ಲಿ ನಾಲ್ಕನೇ ಅಧಿಕೃತ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು. ಆ ಪಂದ್ಯದಲ್ಲಿ ಅರ್ಜೆಂಟಿನಾ ಪೆನಾಲ್ಟಿ ಶೂಟೌಟ್‌ನಲ್ಲಿ ವಿಶ್ವಕಪ್ ಗೆದ್ದಿತ್ತು.
ಮೊರೊಕ್ಕೊದ ಕ್ಯಾಸಾಬ್ಲಾಂಕಾದಲ್ಲಿ ಜನಿಸಿದ ಎಲ್ಫಾತ್, 2001ರಲ್ಲಿ ಅಮೆರಿಕಕ್ಕೆ ವಲಸೆ ಹೋಗಿ ಬಳಿಕ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ಆರಂಭದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಅವರು, ಹವ್ಯಾಸಿ ಫುಟ್ಬಾಲ್ ಆಟಗಾರರಾಗಿದ್ದ ವೇಳೆ ತೀರ್ಪುಗಾರರ ಬಗ್ಗೆ ಸದಾ ದೂರು ನೀಡುತ್ತಿದ್ದ ಕಾರಣ, ಸ್ವತಃ ತೀರ್ಪುಗಾರರಾಗುವಂತೆ ಸ್ನೇಹಿತರಿಂದ ಪ್ರೇರಣೆ ಪಡೆದರು.
2016ರಲ್ಲಿ ಫಿಫಾ ಮಾನ್ಯತೆ ಪಡೆದ ಎಲ್ಫಾತ್, ಅಮೆರಿಕದ ಫುಟ್ಬಾಲ್‌ನಲ್ಲಿ ವಿಡಿಯೊ ಸಹಾಯಕ ತೀರ್ಪುಗಾರ (VAR) ತಂತ್ರಜ್ಞಾನವನ್ನು ಮೈದಾನದಲ್ಲೇ ಮೊದಲ ಬಾರಿ ಬಳಸಿದ ತೀರ್ಪುಗಾರರಲ್ಲಿ ಒಬ್ಬರಾಗಿದ್ದಾರೆ. 2020 ಮತ್ತು 2022ರಲ್ಲಿ ಅಮೆರಿಕದ ವರ್ಷದ ಅತ್ಯುತ್ತಮ ತೀರ್ಪುಗಾರ ಪ್ರಶಸ್ತಿಯನ್ನೂ ಪಡೆದಿದ್ದಾರೆ. 2023ರ ಲೀಗ್ಸ್ ಕಪ್ ಫೈನಲ್‌ನಲ್ಲೂ ಅವರು ತೀರ್ಪುಗಾರರಾಗಿದ್ದು, ಆ ಪಂದ್ಯದಲ್ಲಿ ಮೆಸ್ಸಿ ನಾಯಕತ್ವದ ಇಂಟರ್ ಮಿಯಾಮಿ ತನ್ನ ಮೊದಲ ಪ್ರಶಸ್ತಿಯನ್ನು ಗೆದ್ದಿತ್ತು.



