ಬರಪೀಡಿತ ಪ್ರದೇಶಗಳಿಗೆ ನಿಖಿಲ್ ಕುಮಾರಸ್ವಾಮಿ ಭೇಟಿ: ವಿಜಯಪುರ-ಬಾಗಲಕೋಟೆಯಲ್ಲಿ ರೈತರ ಅಹವಾಲು ಆಲಿಕೆ
ಜುಲೈ 14 ಮತ್ತು 15ರಂದು ಬರಪೀಡಿತ ಗ್ರಾಮಗಳಿಗೆ ಜೆಡಿಎಸ್ ಅಧ್ಯಯನ ತಂಡ ಭೇಟಿ; ರೈತರಿಗೆ ನ್ಯಾಯಸಮ್ಮತ ಪರಿಹಾರಕ್ಕಾಗಿ ಹೋರಾಟದ ಭರವಸೆ

ಕಲಬುರಗಿ: ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಜುಲೈ 13ರಂದು ಸಂಜೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಜುಲೈ 14 ಮತ್ತು 15ರಂದು ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಲಿದ್ದಾರೆ ಎಂದು ಕಲಬುರಗಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾಲರಾಜ್ ಗುತ್ತೇದಾರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ 2026ರ ಮುಂಗಾರು ವೈಪರೀತ್ಯದಿಂದ ಒಂದೆಡೆ ಭಾರಿ ಮಳೆ ಹಾಗೂ ಪ್ರವಾಹದಿಂದ ಅಪಾರ ಹಾನಿಯಾಗಿದ್ದರೆ, ಮತ್ತೊಂದೆಡೆ ಶೇ.40ರಿಂದ 43ರಷ್ಟು ಮಳೆ ಕೊರತೆಯಿಂದ ಹಲವು ಜಿಲ್ಲೆಗಳಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು. ಮಳೆ ಅಭಾವದಿಂದ ಬೆಳೆ ನಷ್ಟ ಅನುಭವಿಸಿರುವ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ನೆಲವನ್ನೇ ನಂಬಿ ಬದುಕುತ್ತಿರುವ ಅನ್ನದಾತರ ಪರಿಸ್ಥಿತಿ ಆತಂಕಕಾರಿ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಜನತಾದಳ (ಜಾತ್ಯತೀತ) ಪಕ್ಷವು ನೆರೆ ಹಾಗೂ ಬರಪೀಡಿತ ಪ್ರದೇಶಗಳ ವಾಸ್ತವ ಸ್ಥಿತಿ ಅಧ್ಯಯನಕ್ಕಾಗಿ ವಿಶೇಷ ತಂಡಗಳನ್ನು ರಚಿಸಿದ್ದು, ರೈತರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಶೀಲಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ತಿಳಿಸಿದರು.
ಜುಲೈ 14ರಂದು ನಿಖಿಲ್ ಕುಮಾರಸ್ವಾಮಿ ವಿಜಯಪುರ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಲಿದ್ದು, ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜುಲೈ 15ರಂದು ಬಾಗಲಕೋಟೆ ಜಿಲ್ಲೆಯ ಬಾದಾಮಿ ಭಾಗದ ರೈತರನ್ನು ಭೇಟಿ ಮಾಡಿ ಅವರ ಅಹವಾಲುಗಳನ್ನು ಆಲಿಸಲಿದ್ದಾರೆ.
ಅಧ್ಯಯನ ತಂಡವು ನೆರೆ ಮತ್ತು ಬರದಿಂದ ತೊಂದರೆಗೊಳಗಾದ ರೈತ ಕುಟುಂಬಗಳನ್ನು ನೇರವಾಗಿ ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಲಿದೆ. ರೈತರಿಗೆ ಸರ್ಕಾರದಿಂದ ನ್ಯಾಯಸಮ್ಮತ ಹಾಗೂ ಅರ್ಹ ಪರಿಹಾರ ದೊರೆಯುವವರೆಗೆ ಜೆಡಿಎಸ್ ಪಕ್ಷ ನಿರಂತರವಾಗಿ ಹೋರಾಟ ನಡೆಸಲಿದೆ ಎಂದು ಬಾಲರಾಜ್ ಗುತ್ತೇದಾರ ತಿಳಿಸಿದರು.
ಈ ಅಧ್ಯಯನ ತಂಡದಲ್ಲಿ ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಅಧ್ಯಯನ ತಂಡದ ಅಧ್ಯಕ್ಷ ಬಂಡೆಪ್ಪ ಕಾಶಂಪೂರ್, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಶಾಸಕರಾದ ಶರಣಗೌಡ ಕಂದಕೂರ್, ಭೀಮನಗೌಡ ಬಸನಗೌಡ ಪಾಟೀಲ್, ಕೆ. ನೇಮಿರಾಜ್ ನಾಯ್ಡು, ಕರೆಮ್ಮ ನಾಯ್ಡು, ರಾಜಾ ವೆಂಕಟಪ್ಪ ನಾಯಕ್, ದೊಡ್ಡಪ್ಪಗೌಡ ಪಾಟೀಲ್, ಸೋಮನಗೌಡ ಪಾಟೀಲ್ ಸೇರಿದಂತೆ ಒಟ್ಟು 21 ಸದಸ್ಯರು ಭಾಗವಹಿಸಲಿದ್ದಾರೆ. ಈ ಭೇಟಿ ಮೂಲಕ ಬರಪೀಡಿತ ಪ್ರದೇಶಗಳ ನೈಜ ಸ್ಥಿತಿಗತಿಗಳನ್ನು ಪರಿಶೀಲಿಸಿ ರೈತರ ಪರವಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಜೆಡಿಎಸ್ ಮುಂದಾಗಿದೆ.



