ಜಿಲ್ಲಾಸುದ್ದಿ

ಕಲಬುರಗಿಯಲ್ಲಿ ಮತದಾರರ ಗಣತಿ ಕಾರ್ಯ ವೇಗ: ಶೇ.96.73ರಷ್ಟು ಗಣತಿ ನಮೂನೆ ವಿತರಣೆ ಪೂರ್ಣ

23.71 ಲಕ್ಷ ಮತದಾರರಲ್ಲಿ 22.94 ಲಕ್ಷ ಮಂದಿಗೆ ಗಣತಿ ನಮೂನೆ ವಿತರಣೆ; 4.64 ಲಕ್ಷಕ್ಕೂ ಹೆಚ್ಚು ಅರ್ಜಿಗಳ ಡಿಜಿಟಲೀಕರಣ ಪೂರ್ಣ

ಕಲಬುರಗಿ, ಜು.12: ಜಿಲ್ಲೆಯಾದ್ಯಂತ ನಡೆಯುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಭರದಿಂದ ಸಾಗುತ್ತಿದ್ದು, ರವಿವಾರದ ಅಂತ್ಯದ ವೇಳೆಗೆ ಒಟ್ಟು 23,71,542 ಮತದಾರರ ಪೈಕಿ 22,94,018 ಮಂದಿಗೆ (ಶೇ.96.73) ಗಣತಿ ನಮೂನೆಗಳನ್ನು ವಿತರಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು (ಬಿ.ಎಲ್.ಓ.) ಮನೆ-ಮನೆಗೆ ತೆರಳಿ ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸುವ ಕಾರ್ಯವನ್ನು ಚುರುಕುಗೊಳಿಸಿದ್ದು, ಇದುವರೆಗೆ 4,64,942 (ಶೇ.19.61) ಮತದಾರರಿಂದ ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಸಂಗ್ರಹಿಸಿ ಮೊಬೈಲ್ ತಂತ್ರಾಂಶದ ಮೂಲಕ ಡಿಜಿಟಲೀಕರಣ ಮಾಡಲಾಗಿದೆ.

ಇದರ ಜೊತೆಗೆ 5,568 (ಶೇ.0.23) ಮತದಾರರು ಸ್ವಯಂಪ್ರೇರಿತರಾಗಿ ಆನ್‌ಲೈನ್ ಮೂಲಕ ತಮ್ಮ ಗಣತಿ ನಮೂನೆಗಳನ್ನು ಸಲ್ಲಿಸಿರುವುದು ವಿಶೇಷವಾಗಿದೆ.

ಮನೆ-ಮನೆಗೆ ಭೇಟಿ ನೀಡಿದ ವೇಳೆ ಬಿ.ಎಲ್.ಓ.ಗಳು 4,012 (ಶೇ.0.17) ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು ಹಾಗೂ 4,660 (ಶೇ.0.20) ಮತದಾರರು ಮೃತಪಟ್ಟಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸಿದ್ದಾರೆ.

ಜಿಲ್ಲಾಡಳಿತವು ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ನಿಗದಿತ ವೇಳಾಪಟ್ಟಿಯಂತೆ ಪೂರ್ಣಗೊಳಿಸಲು ಕ್ರಮ ಕೈಗೊಂಡಿದ್ದು, ಇನ್ನೂ ಗಣತಿ ನಮೂನೆ ಸಲ್ಲಿಸದ ಮತದಾರರು ಶೀಘ್ರದಲ್ಲೇ ನಮೂನೆಗಳನ್ನು ಭರ್ತಿ ಮಾಡಿ ಬಿ.ಎಲ್.ಓ.ಗಳಿಗೆ ಸಲ್ಲಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಮನವಿ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button