₹10 ಸಾವಿರ ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಆಡಳಿತಾಧಿಕಾರಿ ಲೋಕಾಯುಕ್ತ ಬಲೆಗೆ

ಕಲಬುರಗಿ: ಜಮೀನಿನ ಮ್ಯುಟೇಷನ್ (ಮೋಟೇಶನ್) ಮಾಡಿಕೊಡಲು ₹10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಹಣ ಸ್ವೀಕರಿಸುತ್ತಿದ್ದ ಗ್ರಾಮ ಆಡಳಿತಾಧಿಕಾರಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಉದನೂರು ಗ್ರಾಮದ ನಿವಾಸಿ ಸತೀಶ್‌ಕುಮಾರ್ ಪಾಟೀಲ್ ಅವರು ತಮ್ಮ ತಾಯಿ ಮಲ್ಲಮ್ಮ ಅವರ ಹೆಸರಿನಲ್ಲಿರುವ ಉದನೂರು ಗ್ರಾಮದ ಸರ್ವೆ ನಂ. 76/2ರಲ್ಲಿನ 4 ಎಕರೆ ಹಾಗೂ ಸರ್ವೆ ನಂ. 95/3ರಲ್ಲಿನ 3 ಎಕರೆ 34 ಗುಂಟೆ ಸೇರಿದಂತೆ ಒಟ್ಟು 7 ಎಕರೆ 34 ಗುಂಟೆ ಜಮೀನಿನ ಮ್ಯುಟೇಷನ್ ಮಾಡಿಸಲು ಅರ್ಜಿ ಸಲ್ಲಿಸಿದ್ದರು.
ಈ ಕೆಲಸ ಮಾಡಿಕೊಡಲು ಗ್ರಾಮ ಆಡಳಿತಾಧಿಕಾರಿ ರಮೇಶ್ ಹಾಗೂ ಖಾಸಗಿ ವ್ಯಕ್ತಿ ಸಾಗರ್ ಅವರ ಮೂಲಕ ₹10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರಿನ ಆಧಾರದ ಮೇಲೆ ಕರ್ನಾಟಕ ಲೋಕಾಯುಕ್ತ ಕಲಬುರಗಿ ಘಟಕದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ₹10 ಸಾವಿರ ನಗದು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಆರೋಪಿಯನ್ನು ಹಿಡಿದಿದ್ದಾರೆ. ಲಂಚದ ಹಣವನ್ನು ವಶಪಡಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಕರ್ನಾಟಕ ಲೋಕಾಯುಕ್ತ ಕಲಬುರಗಿ ಪೊಲೀಸ್ ಅಧೀಕ್ಷಕ ಸಿದ್ಧರಾಜು ಸಿ. ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದ್ದು, ತನಿಖಾಧಿಕಾರಿ ಪೊಲೀಸ್ ಇನ್‌ಸ್ಪೆಕ್ಟರ್ ರಾಜಶೇಖರ್ ಎಸ್. ಬಡದೇಸರ್ ನೇತೃತ್ವದಲ್ಲಿ ಕ್ರಮ ಕೈಗೊಳ್ಳಲಾಗಿದೆ.



