ಬೋಧನೆಯೊಂದಿಗೆ ಉತ್ತಮ ನಾಗರಿಕರ ನಿರ್ಮಾಣವೂ ಶಿಕ್ಷಕರ ಹೊಣೆ: ಪ್ರೊ. ಬಟ್ಟು ಸತ್ಯನಾರಾಯಣ

ಕಲಬುರಗಿ, ಸೆ.18: ಜ್ಞಾನ ಬೋಧನೆಯಷ್ಟೇ ಅಲ್ಲದೆ, ಉತ್ತಮ ನಾಗರಿಕರನ್ನು ರೂಪಿಸುವ ಜವಾಬ್ದಾರಿಯೂ ಶಿಕ್ಷಕರ ಮೇಲಿದೆ ಎಂದು ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ಕೇವಲ ಜ್ಞಾನ ಬೋಧನೆಗೆ ಸೀಮಿತವಾಗದೆ, ವಿದ್ಯಾರ್ಥಿಗಳ ಕಲಿಕೆಯತ್ತ ಗಮನ ಹರಿಸಬೇಕು. ಅವರ ಸಾಮರ್ಥ್ಯ ಹಾಗೂ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಜತೆಗೆ, ಸಮಾಜದ ಬಗ್ಗೆ ಜವಾಬ್ದಾರಿಯುತ ಮನೋಭಾವ ಬೆಳೆಸಿ ಉತ್ತಮ ನಾಗರಿಕರನ್ನಾಗಿ ರೂಪಿಸುವ ಹೊಣೆಗಾರಿಕೆಯೂ ಶಿಕ್ಷಕರ ಮೇಲಿದೆ ಎಂದರು.
ಇಡೀ ಸಮಾಜವು ಶಿಕ್ಷಕ ಸಮುದಾಯದ ಮೇಲೆ ಅಪಾರ ನಂಬಿಕೆ ಇಟ್ಟಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಹಲವು ಆಶೋತ್ತರಗಳನ್ನು ಹೊತ್ತುಕೊಂಡು ಉನ್ನತ ಶಿಕ್ಷಣಕ್ಕಾಗಿ ವಿಶ್ವವಿದ್ಯಾಲಯಗಳಿಗೆ ಬರುತ್ತಾರೆ. ಇಂತಹ ಸಂದರ್ಭದಲ್ಲಿ ಸೂಕ್ತ ಮಾರ್ಗದರ್ಶನ ನೀಡಿ, ವಿದ್ಯಾರ್ಥಿಗಳನ್ನು ಸರಿಯಾದ ಗುರಿಯತ್ತ ಕೊಂಡೊಯ್ಯುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಿಕ್ಷಕರು ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ಸಮರ್ಪಣಾ ಮನೋಭಾವದಿಂದ ನಿರ್ವಹಿಸಿದಾಗ ಮಾತ್ರ ಸಮಾಜ ಮತ್ತು ರಾಷ್ಟ್ರದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯ ಎಂದು ಹೇಳಿದರು.
ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರು ಶಿಕ್ಷಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿ, ತಮ್ಮ ಜ್ಞಾನ, ತಾತ್ವಿಕ ಚಿಂತನೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳ ಮೂಲಕ ದೇಶದ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದರು. ಭಾರತದ ಉಪರಾಷ್ಟ್ರಪತಿಯಾಗಿ ಹಾಗೂ ದೇಶದ ಎರಡನೇ ರಾಷ್ಟ್ರಪತಿಯಾಗಿ ಸಲ್ಲಿಸಿದ ಸೇವೆ ಸ್ಮರಣೀಯವಾಗಿದೆ ಎಂದರು.
ಶ್ರೇಷ್ಠ ತತ್ವಜ್ಞಾನಿ ಹಾಗೂ ಶಿಕ್ಷಣತಜ್ಞರಾಗಿದ್ದ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಸೆ.5ರಂದು ದೇಶದಾದ್ಯಂತ ಪ್ರತಿವರ್ಷ ಶಿಕ್ಷಕರ ದಿನ ಆಚರಿಸಲಾಗುತ್ತದೆ. ಒಬ್ಬ ಶಿಕ್ಷಕರು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿರುವುದು ಶಿಕ್ಷಕ ವೃತ್ತಿಯ ಮಹತ್ವ ಹಾಗೂ ಗೌರವಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಪ್ರಭಾರ ಕುಲಸಚಿವ ಪ್ರೊ. ಚನ್ನವೀರ ಆರ್.ಎಂ. ಮಾತನಾಡಿ, ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರು ಇಡೀ ಶಿಕ್ಷಕ ಸಮುದಾಯಕ್ಕೆ ಪ್ರೇರಣಾದಾಯಕ ಹಾಗೂ ಮಾದರಿ ವ್ಯಕ್ತಿತ್ವವಾಗಿದ್ದಾರೆ. ಶಿಕ್ಷಕರು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ಹಾಗೂ ಹೊಣೆಗಾರಿಕೆಯಿಂದ ನಿರ್ವಹಿಸಬೇಕು. ಶಿಕ್ಷಕ ವೃತ್ತಿಗೆ ನಿವೃತ್ತಿ ಎಂಬುದಿಲ್ಲ. ಕೊನೆಯ ಉಸಿರಿರುವವರೆಗೂ ಶಿಕ್ಷಕರು ಜ್ಞಾನ, ಓದು, ಬರಹ ಹಾಗೂ ಮಾರ್ಗದರ್ಶನದ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿರುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಪ್ರಾಧ್ಯಾಪಕರನ್ನು ಕುಲಪತಿ ಸನ್ಮಾನಿಸಿ ಗೌರವಿಸಿದರು. ಅತ್ಯುತ್ತಮ ಸಂಶೋಧನಾ ಪ್ರಶಸ್ತಿ ಪಡೆದ ಡಾ. ಮಲ್ಲೇಶ್ ಉಮಲ್ಲಾ, ಡಾ. ಅಶೋಕ್ ಪಬ್ಬತ್ತಿ ಸೇರಿದಂತೆ ಹಲವು ಪ್ರಾಧ್ಯಾಪಕರ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ವಿಶ್ವವಿದ್ಯಾಲಯದ ಹೊರಗಡೆ ಗೌರವಿಸಲ್ಪಟ್ಟ ಪ್ರಾಧ್ಯಾಪಕರಾದ ಪ್ರೊ. ಸತ್ಯನಾರಾಯಣ, ಡಾ. ಎನ್. ಸಂದೀಪ್, ಪ್ರೊ. ಶೇಷನಾಥ ಭೋಸಲೆ, ಡಾ. ಜಿ.ಆರ್. ಅಂಗಡಿ, ಡಾ. ನರಸಿಂಗ್ ಪ್ರಧಾನ, ಪ್ರೊ. ಶಿವಗಂಗಾ ರುಮ್ಮಾ, ಡಾ. ವಿಜಯಕುಮಾರ್, ಡಾ. ಜಯದೇವಿ ಜಂಗಮಶೆಟ್ಟಿ, ಡಾ. ಶೈಲಜಾ ಕೊನೆಕ, ಡಾ. ಸಂಗಮೇಶ್ ರಾಜೊಳ್ಳಿ ಅವರನ್ನು ಸಹ ಸನ್ಮಾನಿಸಲಾಯಿತು.
ಪ್ರೊ. ಜಿ.ಆರ್. ಅಂಗಡಿ ಸ್ವಾಗತಿಸಿದರು. ಡಾ. ಅಖಿಲೇಶ್ ಮಿಶ್ರಾ ವಂದಿಸಿದರು.



