ಸಾಂಸ್ಕೃತಿಕ

ರಾಷ್ಟ್ರಪತಿ ಭವನದ ‘ಆರ್ಟಿಸ್ಟ್ ಇನ್ ರೆಸಿಡೆನ್ಸ್’ ಕಾರ್ಯಕ್ರಮಕ್ಕೆ ಕಲಬುರಗಿಯ ಕಲಾವಿದ ರೆಹಮಾನ್ ಪಟೇಲ್ ಆಯ್ಕೆ

ರಾಷ್ಟ್ರಪತಿ ಭವನದಲ್ಲಿ ಕಲಾಕೃತಿ ಪ್ರದರ್ಶನಕ್ಕೆ ಆಹ್ವಾನ; ವಿಜಯನಗರ ಶೈಲಿಯ ಲಘುಚಿತ್ರಕಲೆಗೆ ರಾಷ್ಟ್ರೀಯ ಗೌರವ

ಖ್ಯಾತ ಚಿತ್ರಕಲಾವಿದ ಹಾಗೂ ಸಂಶೋಧಕ ರೆಹಮಾನ್ ಪಟೇಲ್ ಅವರು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಜುಲೈ 19ರಿಂದ 29ರವರೆಗೆ ನಡೆಯಲಿರುವ ಪ್ರತಿಷ್ಠಿತ ‘ಆರ್ಟಿಸ್ಟ್ ಇನ್ ರೆಸಿಡೆನ್ಸ್’ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.

ರಾಷ್ಟ್ರಪತಿ ಭವನದ ಅಧ್ಯಕ್ಷರ ಕಾರ್ಯಾಲಯದ ಕಲೆ ಮತ್ತು ವಸ್ತುಸಂಗ್ರಹಾಲಯ ವಿಭಾಗದ ಉಪನಿರ್ದೇಶಕರ ಕಚೇರಿ ನೀಡಿರುವ ಅಧಿಕೃತ ಪತ್ರದಲ್ಲಿ, ರೆಹಮಾನ್ ಪಟೇಲ್ ಅವರ ಎರಡು ಕಲಾಕೃತಿಗಳನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುವುದು ಎಂದು ತಿಳಿಸಲಾಗಿದೆ. ಅಲ್ಲದೆ, ಕಾರ್ಯಕ್ರಮದ ಅವಧಿಯಲ್ಲಿ ಅವರು ಸ್ಥಳದಲ್ಲೇ ಒಂದು ಹೊಸ ಕಲಾಕೃತಿಯನ್ನು ರಚಿಸಲಿದ್ದು, ಆ ಕಲಾಕೃತಿಯನ್ನು ರಾಷ್ಟ್ರಪತಿ ಭವನದ ಶಾಶ್ವತ ಕಲಾಸಂಗ್ರಹಕ್ಕೆ ಸೇರಿಸಲಾಗುತ್ತದೆ.

ರೆಹಮಾನ್ ಪಟೇಲ್ ಅವರು ಕಳೆದ ಮೂರು ದಶಕಗಳಿಂದ ವಿಜಯನಗರ ಶೈಲಿಯ ಸಾಂಪ್ರದಾಯಿಕ ಲಘುಚಿತ್ರಕಲೆ (ಮಿನಿಯೇಚರ್ ಪೇಂಟಿಂಗ್) ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು, ತಮ್ಮ ವಿಶಿಷ್ಟ ಕಲಾಸಾಧನೆಯ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇದೇ ಕಲಾಶೈಲಿಯನ್ನು ಅವರು ರಾಷ್ಟ್ರಪತಿ ಭವನದಲ್ಲಿ ಪ್ರತಿನಿಧಿಸಲಿದ್ದಾರೆ.

ಅವರ ಕಲಾಸೇವೆಯನ್ನು ಗುರುತಿಸಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ. ಅವುಗಳಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಮುಖವಾಗಿದೆ.

ಈ ಕುರಿತು ಸಂತಸ ವ್ಯಕ್ತಪಡಿಸಿದ ರೆಹಮಾನ್ ಪಟೇಲ್, ದೇಶದ ಅತ್ಯುನ್ನತ ಸಾಂಸ್ಕೃತಿಕ ಹಾಗೂ ಸಾಂವಿಧಾನಿಕ ಪ್ರತಿಷ್ಠೆಯ ಸಂಕೇತವಾದ ರಾಷ್ಟ್ರಪತಿ ಭವನದಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸುವುದು ಹಾಗೂ ಕರ್ನಾಟಕದ ವಿಜಯನಗರ ಕಲಾ ಪರಂಪರೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಅವಕಾಶ ದೊರೆತಿರುವುದು ಅಪಾರ ಹೆಮ್ಮೆ ಮತ್ತು ಗೌರವದ ಸಂಗತಿ ಎಂದು ಹೇಳಿದರು.

ಈ ಆಯ್ಕೆ ತಮ್ಮ ಕಲಾಜೀವನದ ಮಹತ್ವದ ಮೈಲಿಗಲ್ಲಾಗಿದ್ದು, ಮುಂದಿನ ದಿನಗಳಲ್ಲಿ ಭಾರತೀಯ ಸಾಂಪ್ರದಾಯಿಕ ಕಲೆಯನ್ನು ಇನ್ನಷ್ಟು ಸಮರ್ಥವಾಗಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲು ಪ್ರೇರಣೆ ನೀಡಲಿದೆ ಎಂದು ಅವರು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button