ಸಾಂಸ್ಕೃತಿಕ

ಆಗಸ್ಟ್ 16ರಂದು ಕಲಬುರಗಿಯಲ್ಲಿ ಪ್ರಥಮ ಕಾವ್ಯ ಮಹಿಳಾ ಸಮ್ಮೇಳನ

ಮಹಿಳಾ ಕವಯಿತ್ರಿಯರ ಸಾಹಿತ್ಯ ಪ್ರತಿಭೆಗೆ ವೇದಿಕೆ; ಹೊಸ ಚಿಂತನೆಗಳಿಗೆ ಪ್ರೋತ್ಸಾಹ ನೀಡುವ ಮಹತ್ವದ ಕಾರ್ಯಕ್ರಮ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಗಸ್ಟ್ 16ರಂದು ನಗರದ ಕನ್ನಡ ಭವನದಲ್ಲಿ ಜಿಲ್ಲೆಯ ಪ್ರಥಮ ಕಾವ್ಯ ಮಹಿಳಾ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ್ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಹಿಳಾ ಕವಯಿತ್ರಿಯರ ಸಾಹಿತ್ಯ ಸೃಜನಶೀಲತೆಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ವಿಶೇಷ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಮಹಿಳೆಯರ ಅಂತರಾಳದ ಭಾವನೆಗಳು, ಸಾಮಾಜಿಕ ಬದುಕಿನ ಅನುಭವಗಳು, ಸ್ವಾಭಿಮಾನ, ಸಮಾನತೆ ಹಾಗೂ ಜೀವನ ಮೌಲ್ಯಗಳನ್ನು ಪ್ರತಿಬಿಂಬಿಸುವ ಕಾವ್ಯ ಸಾಹಿತ್ಯಕ್ಕೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶ ಈ ಸಮ್ಮೇಳನದ್ದಾಗಿದೆ. ಮಹಿಳೆಯರಲ್ಲಿ ಅಡಗಿರುವ ಸೃಜನಶೀಲ ಪ್ರತಿಭೆಯನ್ನು ಹೊರತರುವ ಜೊತೆಗೆ ಅವರ ಸಾಹಿತ್ಯಿಕ ಅಭಿವ್ಯಕ್ತಿಗೆ ಹೊಸ ಅವಕಾಶಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ಮಹಿಳಾ ಸಾಹಿತ್ಯಕ್ಕೆ ವಿಶೇಷ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಸಮ್ಮೇಳನ ಮಹತ್ವದ ಹೆಜ್ಜೆಯಾಗಿದ್ದು, ಮಹಿಳಾ ಕವಯಿತ್ರಿಯರ ಕಾವ್ಯಧ್ವನಿಗೆ ವಿಶಾಲ ವೇದಿಕೆ ಒದಗಿಸುವ ಮೂಲಕ ಜಿಲ್ಲೆಯ ಸಾಹಿತ್ಯ ಚಟುವಟಿಕೆಗಳಿಗೆ ಹೊಸ ಆಯಾಮ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿರುವ ಮಹಿಳಾ ಲೇಖಕಿಯೊಬ್ಬರನ್ನು ಆಯ್ಕೆ ಮಾಡಲಾಗುವುದು. ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ಸ್ವಾಗತ ಸಮಿತಿಯನ್ನೂ ಶೀಘ್ರದಲ್ಲೇ ರಚಿಸಲಾಗುವುದು ಎಂದು ವಿಜಯಕುಮಾರ್ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button