ಪಿಎಂಎಫ್‌ಬಿವೈ ಯೋಜನೆಯಡಿ ಬೆಳೆ ಸಮೀಕ್ಷೆ ವರದಿ ಅವೈಜ್ಞಾನಿಕ: ಬಿ.ಆರ್. ಪಾಟೀಲ

ಕಲಬುರಗಿ, ಸೆ.13: 125 ವರ್ಷಗಳ ಬಳಿಕ ಎಲ್‌ನಿನೊ ಪರಿಣಾಮದಿಂದಾಗಿ ಈ ಬಾರಿ ಮುಂಗಾರು ಮಳೆ ವಿಳಂಬವಾಗಿದ್ದು, ಜೂನ್‌ನಲ್ಲಿ ನಡೆಯಬೇಕಿದ್ದ ಬಿತ್ತನೆ ಕಾರ್ಯ ಸೆಪ್ಟೆಂಬರ್‌ವರೆಗೂ ಪೂರ್ಣಗೊಳ್ಳದೆ ಉಳಿದಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ನಷ್ಟದ ಸಮೀಕ್ಷೆಯನ್ನು ಅಧಿಕಾರಿಗಳು ತಮಗೆ ಇಷ್ಟ ಬಂದಂತೆ ಹೊಲಗಳನ್ನು ಆಯ್ಕೆ ಮಾಡಿಕೊಂಡು ಅವೈಜ್ಞಾನಿಕವಾಗಿ ವರದಿ ಸಲ್ಲಿಸುತ್ತಿರುವುದು ಗಂಭೀರ ಸಮಸ್ಯೆಯಾಗಿದೆ ಎಂದು ಆಳಂದ ಶಾಸಕ ಹಾಗೂ ಯೋಜನಾ ನೀತಿ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಉದ್ದೇಶ ರೈತರನ್ನು ಬೆಳೆ ನಷ್ಟದಿಂದ ರಕ್ಷಿಸಿ ಆರ್ಥಿಕ ಭದ್ರತೆ ಒದಗಿಸುವುದು. ಆದರೆ ಪ್ರಸ್ತುತ ರೈತರು ತಮ್ಮ ಹಕ್ಕಿನ ಬೆಳೆ ವಿಮೆ ಪರಿಹಾರ ಪಡೆಯಲು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
2025-26ನೇ ಸಾಲಿನಲ್ಲಿ ಬೆಳೆ ವಿಮೆ ಮಾಡಿಸಿದ್ದ ರೈತರ ಬೆಳೆ ಹಾನಿಯಾದ ಸಂದರ್ಭದಲ್ಲಿ ವಿಮಾ ಕಂಪನಿ ಹಾಗೂ ಸಂಬಂಧಿಸಿದ ಇಲಾಖೆಗಳು ತಮ್ಮದೇ ರೀತಿಯಲ್ಲಿ ಹೊಲಗಳನ್ನು ಆಯ್ಕೆ ಮಾಡಿಕೊಂಡು, ರೈತರಿಗೆ ಯಾವುದೇ ಮಾಹಿತಿ ನೀಡದೆ ಏಕಪಕ್ಷೀಯವಾಗಿ ಹಾಗೂ ಅವೈಜ್ಞಾನಿಕವಾಗಿ ಬೆಳೆ ಕಟಾವು ಪ್ರಯೋಗದ ವರದಿ ಸಲ್ಲಿಸಿರುವ ಆರೋಪಗಳಿವೆ. ಇದರಿಂದ ಆಳಂದ ತಾಲೂಕಿನ ಸುಮಾರು ಆರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ರೈತರಿಗೆ ಬೆಳೆ ಹಾನಿಯಾಗಿದ್ದರೂ ಅವೈಜ್ಞಾನಿಕ ವರದಿಯಿಂದಾಗಿ ಎರಡನೇ ಕಂತಿನ ಬೆಳೆ ವಿಮೆ ಪರಿಹಾರ ದೊರೆಯದಂತಾಗಿದೆ ಎಂದು ತಿಳಿಸಿದರು.
ಈ ರೀತಿಯ ವರದಿಗಳಿಂದ ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆಯಾಗುತ್ತಿದೆ. ಜಿಲ್ಲಾಡಳಿತ ಹಾಗೂ ವಿಮಾ ಕಂಪನಿಗಳು ಅವೈಜ್ಞಾನಿಕ ಬೆಳೆ ಕಟಾವು ವರದಿಗಳನ್ನು ಮರುಪರಿಶೀಲಿಸಿ, ಸಂಬಂಧಪಟ್ಟ ರೈತರ ಅಹವಾಲುಗಳನ್ನು ಆಲಿಸಬೇಕು. ನೊಂದ ರೈತರಿಗೆ ಸೂಕ್ತ ಬೆಳೆ ವಿಮೆ ಪರಿಹಾರವನ್ನು ವಿಳಂಬವಿಲ್ಲದೆ, ಬಡ್ಡಿಯೊಂದಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಬೆಳೆ ಕಟಾವು ಸಮೀಕ್ಷೆಯನ್ನು ತಕ್ಷಣ ಸ್ಥಗಿತಗೊಳಿಸಿ, ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಗ್ರಾಮಸಭೆ ನಡೆಸಿ ಯಾವ ಹೊಲವನ್ನು ಆಯ್ಕೆ ಮಾಡಲಾಗುತ್ತಿದೆ ಎಂಬುದನ್ನು ರೈತರ ಸಮ್ಮುಖದಲ್ಲೇ ನಿರ್ಧರಿಸಬೇಕು. ಬೆಳೆ ಕಟಾವು ಕುರಿತು ರೈತರಿಗೆ ಮುಂಚಿತವಾಗಿ ಮಾಹಿತಿ ನೀಡಿ, ಅವರ ಸಮ್ಮುಖದಲ್ಲೇ ಪಾರದರ್ಶಕವಾಗಿ ಸಮೀಕ್ಷೆ ನಡೆಸಿ ವೈಜ್ಞಾನಿಕವಾಗಿ ವರದಿ ಸಲ್ಲಿಸಿದಾಗ ಮಾತ್ರ ಯೋಜನೆಯಡಿ ನೊಂದ ರೈತರಿಗೆ ಸೂಕ್ತ ಪರಿಹಾರ ದೊರೆಯಲಿದೆ ಎಂದು ಹೇಳಿದರು.
ಪ್ರಸ್ತುತ ಬೆಳೆ ಕಟಾವು ಸಮೀಕ್ಷೆಯನ್ನು ತಾಲೂಕು ಕೃಷಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ವಿಮಾ ಕಂಪನಿಗಳ ಪ್ರತಿನಿಧಿಗಳು ನಡೆಸುತ್ತಿದ್ದಾರೆ. ಆದರೆ ವರದಿ ಸಲ್ಲಿಸುವ ಸಂದರ್ಭದಲ್ಲಿ ಹಿಂದಿನ ಏಳು ವರ್ಷಗಳ ಇಳುವರಿ ಸರಾಸರಿಯನ್ನು ಆಧಾರವಾಗಿಸಿಕೊಂಡು ಅವೈಜ್ಞಾನಿಕ ವರದಿ ನೀಡಲಾಗುತ್ತಿದೆ. ಇದರ ಪರಿಣಾಮವಾಗಿ ಆಯಾ ವರ್ಷದ ವಾಸ್ತವಿಕ ಬೆಳೆ ಹಾನಿಗೆ ಅನುಗುಣವಾಗಿ ರೈತರಿಗೆ ಪರಿಹಾರ ದೊರೆಯುತ್ತಿಲ್ಲ ಎಂದು ದೂರಿದರು.
ಹೀಗಾಗಿ ಸರ್ಕಾರವು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ಸಮೀಕ್ಷೆ ಹಾಗೂ ಬೆಳೆ ವಿಮೆ ಪರಿಹಾರ ನಿರ್ಧರಿಸುವ ಪ್ರಕ್ರಿಯೆಯಲ್ಲಿ ಬಳಸುತ್ತಿರುವ ಹಿಂದಿನ 5ರಿಂದ 7 ವರ್ಷಗಳ ಇಳುವರಿ ಸರಾಸರಿಯನ್ನು ತಕ್ಷಣ ಪರಿಷ್ಕರಿಸಬೇಕು. ರೈತರು ಯಾವ ವರ್ಷ ಬೆಳೆ ವಿಮೆ ಕಂತು ಪಾವತಿಸಿ ನಷ್ಟ ಅನುಭವಿಸುತ್ತಾರೋ, ಆ ವರ್ಷದ ವಾಸ್ತವಿಕ ಇಳುವರಿಗೆ ಅನುಗುಣವಾಗಿ ಬೆಳೆ ನಷ್ಟದ ವರದಿ ಪಡೆದು ಅದೇ ವರ್ಷದಲ್ಲಿ ವಿಮೆ ಪರಿಹಾರ ಘೋಷಿಸುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಿಎಂಎಫ್‌ಬಿವೈ ಯೋಜನೆಯ ಅನುಷ್ಠಾನವನ್ನು ಖಾಸಗಿ ಕಂಪನಿಗಳಿಗೆ ವಹಿಸಿರುವುದು ಸೂಕ್ತವಲ್ಲ. ಯೋಜನೆ ನಿರ್ವಹಿಸುವ ಕಂಪನಿಗಳಲ್ಲಿರುವ ಸಿಬ್ಬಂದಿಗೆ ಕೃಷಿ ಪದವಿ ಅಥವಾ ಸೂಕ್ತ ತರಬೇತಿ ಹಾಗೂ ಅನುಭವ ಇಲ್ಲದಿರುವುದು ಕಂಡುಬಂದಿದೆ. ರೈತರ ಸೇವೆಗಿಂತ ಕಂಪನಿಗಳ ಲಾಭಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿರುವುದರಿಂದ ಯೋಜನೆಯ ಉದ್ದೇಶ ಸಮರ್ಪಕವಾಗಿ ಈಡೇರುತ್ತಿಲ್ಲ ಎಂದು ಆರೋಪಿಸಿದರು.
ಮುಂದಿನ ದಿನಗಳಲ್ಲಿ ಯೋಜನೆಯನ್ನು ಕೃಷಿ ಇಲಾಖೆಯ ಮೂಲಕ ಹಾಗೂ ಸರ್ಕಾರಿ ವಿಮಾ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಬೇಕು. ನುರಿತ ಹಾಗೂ ಅನುಭವಿ ಅಧಿಕಾರಿಗಳಿಂದ ವೈಜ್ಞಾನಿಕ ಮತ್ತು ಪಾರದರ್ಶಕವಾಗಿ ಬೆಳೆ ಕಟಾವು ಸಮೀಕ್ಷೆ ನಡೆಸಬೇಕು. ಸಮೀಕ್ಷೆ ರೈತರು ಹಾಗೂ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯಬೇಕು. ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಒಂದರಂತೆ ರೈತ ಮಾಹಿತಿ ಕೇಂದ್ರಗಳನ್ನು ಆರಂಭಿಸಬೇಕು. ಇದರಿಂದ ರೈತರಲ್ಲಿ ಯೋಜನೆಯ ಬಗ್ಗೆ ವಿಶ್ವಾಸ ಮೂಡಿಸುವುದರ ಜೊತೆಗೆ ಅವರ ಹಕ್ಕುಗಳನ್ನು ರಕ್ಷಿಸಲು ಸಾಧ್ಯವಾಗುತ್ತದೆ ಎಂದು ಬಿ.ಆರ್. ಪಾಟೀಲ ಒತ್ತಾಯಿಸಿದರು.



