ಜಿಲ್ಲಾಸುದ್ದಿ

ಸಂಚಾರ ಅವ್ಯವಸ್ಥೆ ಖಂಡಿಸಿ ಸೆ.17ರಂದು ಕಪ್ಪುಪಟ್ಟಿ ಪ್ರದರ್ಶನ

ಕಲಬುರಗಿ, ಸೆ.17: ನಗರದ ಸೂಪರ್‌ ಮಾರ್ಕೆಟ್, ಸರಾಫ್ ಬಜಾರ್ ಹಾಗೂ ಚಪ್ಪಲ್ ಬಜಾರ್ ಪ್ರದೇಶಗಳಲ್ಲಿನ ಸಂಚಾರ ಅವ್ಯವಸ್ಥೆ ಹಾಗೂ ರಸ್ತೆ ಅತಿಕ್ರಮಣ ತೆರವುಗೊಳಿಸುವಂತೆ ಆಗ್ರಹಿಸಿ ಸೆ.17ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಪ್ಪುಪಟ್ಟಿ ಪ್ರದರ್ಶನ ನಡೆಸಲಾಗುವುದು ಎಂದು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಶಿವಲಿಂಗ ಹಳಿಮನಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರುಕಟ್ಟೆ ಪ್ರದೇಶಗಳಲ್ಲಿ ಅಂಗಡಿಕಾರರು ಹಾಗೂ ತಳ್ಳುಗಾಡಿ ವ್ಯಾಪಾರಿಗಳು ರಸ್ತೆಯನ್ನೇ ಅತಿಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿರುವುದರಿಂದ ವಾಹನ ಹಾಗೂ ಪಾದಚಾರಿಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಸಾರ್ವಜನಿಕರು ತಮ್ಮ ವಾಹನಗಳೊಂದಿಗೆ ಸಂಚರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಸರಾಫ್ ಬಜಾರ್ ಹಾಗೂ ಚಪ್ಪಲ್ ಬಜಾರ್‌ನಲ್ಲಿ ದಿನದಿಂದ ದಿನಕ್ಕೆ ಜನದಟ್ಟಣೆ ಹೆಚ್ಚಾಗುತ್ತಿದ್ದು, ಪಾದಚಾರಿಗಳಿಗೂ ಸರಾಗವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ಜೇಬುಗಳ್ಳತನ ಸೇರಿದಂತೆ ವಿವಿಧ ಪ್ರಕರಣಗಳು ನಡೆಯುತ್ತಿವೆ. ಮಾರುಕಟ್ಟೆಗೆ ಬರುವ ಸಾರ್ವಜನಿಕರು ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಂತಾಗಿದೆ. ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವ ಘಟನೆಗಳೂ ನಡೆಯುತ್ತಿವೆ ಎಂದು ಆರೋಪಿಸಿದರು.

ಸಮಸ್ಯೆ ಖಂಡಿಸಿ ಸೆ.3ರಂದು ಚಪ್ಪಲ್ ಬಜಾರ್‌ನಲ್ಲಿ ರಸ್ತೆ ತಡೆ ಚಳವಳಿ ನಡೆಸಲಾಗಿತ್ತು. ಆಗ ಸ್ಥಳಕ್ಕೆ ಭೇಟಿ ನೀಡಿದ್ದ ಮಹಾನಗರ ಪಾಲಿಕೆಯ ಮೂವರು ವಲಯ ಆಯುಕ್ತರು, ಬೇಡಿಕೆಗಳನ್ನು 15 ದಿನಗಳೊಳಗೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ 10 ದಿನಗಳು ಕಳೆದರೂ ರಸ್ತೆಯ ಮೇಲಿನ ತಳ್ಳುಗಾಡಿಗಳು, ಅನಧಿಕೃತ ಅಂಗಡಿಗಳು ಹಾಗೂ ಸ್ಟ್ಯಾಂಡ್‌ಗಳನ್ನು ತೆರವುಗೊಳಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಇದು ಕೇವಲ ಸಂಘಟನೆಯ ಬೇಡಿಕೆಯಲ್ಲ. ಇಡೀ ನಗರದ ಸಾರ್ವಜನಿಕರ ಸಮಸ್ಯೆಯಾಗಿದೆ. ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಶಿವಲಿಂಗ ಹಳಿಮನಿ ಆಗ್ರಹಿಸಿದರು.

ದಕ್ಷಿಣ ಮತಕ್ಷೇತ್ರಕ್ಕೆ ನೀಡುವಷ್ಟೇ ಆದ್ಯತೆಯನ್ನು ಉತ್ತರ ಮತಕ್ಷೇತ್ರಕ್ಕೂ ನೀಡಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆ ಅತಿಕ್ರಮಣವನ್ನು ಕೂಡಲೇ ತೆರವುಗೊಳಿಸಿ, ರಸ್ತೆಯ ಮೇಲೆ ವ್ಯಾಪಾರ ನಡೆಸುವುದಕ್ಕೆ ಅವಕಾಶ ನೀಡಬಾರದು. ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸಂದೀಪ್ ಪಿ. ಭರಣಿ, ಸತೀಶ್ ಕಡುಣಿ, ಗೌತಮ್, ವಿಶ್ವನಾಥ ಡೇಕೂನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button