ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ:ಜಿಲ್ಲಾಧಿಕಾರಿಗಳಿಂದ ಪೋಸ್ಟರ್ ಬಿಡುಗಡೆ

ಕಲಬುರಗಿ,ಜು.2- ರಾಜ್ಯ ಸರ್ಕಾರವು 2026-27ನೇ ಸಾಲಿನ ಮುಂಗಾರು ಹಂಗಾಮಿಗಾಗಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು(R-WBCIS) ಅನುಷ್ಠಾನಗೊಳಿಸಲು ಮಂಜೂರಾತಿ ನೀಡಿರುವ ಹಿನ್ನೆಲೆಯಲ್ಲಿ ರೈತಾಪಿ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಬುಧವಾರ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರು ತಮ್ಮ ಕಚೇರಿಯಲ್ಲಿ ಯೋಜನೆ ಕುರಿತ ಪೋಸ್ಟರ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಅನ್ನದಾತ ರೈತ ಈ ಯೋಜನೆಯ ಹೆಚ್ಚಿನ ಸೌಲಭ್ಯ ಪಡೆಯಲು ಗ್ರಾಮೀಣ ಮಟ್ಟದಲ್ಲಿ ವ್ಯಾಪಕ ಪ್ರಚಾರ ಕಾರ್ಯ ಕೈಗೊಳ್ಳುವಂತೆ ಮತ್ತು ಹಚ್ಚಿನ ಬೆಳೆ ವಿಮೆ ನೊಂದಣಿ ಮಾಡಿಸುವಂತೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ್ ಸಂಕನೂರ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಪ್ರೊಬೇಷನರ್ ಐ.ಎ.ಎಸ್ ಅಧಿಕಾರಿ ಶಿಖರ ಮೋಘಾ, ತೋಟಗಾರಿಕೆ ಜಂಟಿ ನಿರ್ದೇಶಕ ಸಂತೋಷ ಇನಾಂದಾರ ಉಪಸ್ಥಿತರಿದ್ದರು.
ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಕಲಬುರಗಿ ಜಿಲ್ಲೆಯಲ್ಲಿ ಪಪ್ಪಾಯ ಮತ್ತು ಹಸಿರು ಮೆಣಸಿನಕಾಯಿ ಬೆಳೆಗಳನ್ನು ಎಲ್ಲಾ ಗ್ರಾಮ ಪಂಚಾಯಿತಿ/ನಗರ ಮತ್ತು ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಹಾಗೂ ದ್ರಾಕ್ಷಿ ಬೆಳೆಯನ್ನು ಅಫಜಲಪೂರ ತಾಲೂಕಿನ 22, ಆಳಂದ-15, ಚಿಂಚೋಳಿ-2, ಚಿತ್ತಾಪೂರ-1, ಕಲಬುರಗಿ-6, ಜೇವರ್ಗಿ-4 ಹಾಗೂ ಯಡ್ರಾಮಿ ತಾಲ್ಲೂಕಿನ-10 ಗ್ರಾಮ ಪಂಚಾಯಿತಿ/ನಗರ ಮತ್ತು ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ತಾಕುಗಳು ಬೆಳೆ ವಿಮೆ ಯೋಜನೆಗೆ ಒಳಪಡಿಸಲಾಗಿದೆ.
ಹಸಿರು ಮೆಣಸಿನಕಾಯಿ, ಪಪ್ಪಾಯ ಮತ್ತು ದ್ರಾಕ್ಷಿ ಬೆಳೆಗಳಿಗೆ ಪ್ರತಿ ಹೆಕ್ಟರ್ ಗೆ ಕ್ರಮವಾಗಿ 3,550 ರೂ., 6,700 ರೂ. ಹಾಗೂ 14,000 ರೂ. ವಿಮಾ ಕಂತಿನ ಮೊತ್ತ ನಿಗದಿಯಾಗಿದ್ದು, ಅದೇ ರೀಯಿ ವಿಮಾ ಮೊತ್ತ ಹಸಿರು ಮೆಣಸಿನಕಾಯಿ ಪ್ರತಿ ಹೆಕ್ಟರ್ ಗೆ 71,000 ರೂ., ಪಪ್ಪಾಯ ಪ್ರತಿ ಹೆಕ್ಟೇರ್ ಗೆ 1,34,000 ರೂ. ಹಾಗೂ ದ್ರಾಕ್ಷಿ ಬೆಳೆ ಪ್ರತಿ ಹೆಕ್ಟೇರ್ ಗೆ 2,80,000 ರೂ. ನಿಗದಿಪಡಿಸಲಾಗಿರುತ್ತದೆ.
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ರೈತರು ಹತ್ತಿರದ ಬ್ಯಾಂಕ್, ಗ್ರಾಮ ಒನ್ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಜುಲೈ 31 ರೊಳಗೆ ನೊಂದಾಯಿಸಿಕೊಳ್ಳಲು ಕೊನೆಯ ದಿನವಾಗಿರುತ್ತದೆ. ಪ್ರಸಕ್ತ 2026-27ನೇ ಸಾಲಿಗೆ ಈ ಯೋಜನೆ ಅನುಷ್ಠಾನಗೊಳಿಸಲು ಕಲಬುರಗಿ ಜಿಲ್ಲೆಗೆ Agricultural Insurance Company(AIC) ವಿಮಾ ಕಂಪನಿಯು ಆಯ್ಕೆ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗೆ ರೈತರು ತಾಲೂಕಿನ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು/ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳು/ ಹತ್ತಿರದ ಬ್ಯಾಂಕುಗಳ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.



