ಕಲಬುರಗಿ| ಬೆಳೆ ವಿಮೆ ಹಣ ಬಿಡುಗಡೆಗೆ ಆಗ್ರಹಿಸಿ ರೈತರ ಪ್ರತಿಭಟನೆ

ಕಲಬುರಗಿ : ಕಳೆದ ವರ್ಷದ ಬೆಳೆ ವಿಮೆ ಪರಿಹಾರದ ಹಣ ಇನ್ನೂ ರೈತರ ಖಾತೆಗೆ ಜಮಾ ಆಗದಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸೇಡಂ ತಾಲೂಕು ಘಟಕದ ವತಿಯಿಂದ ಸೇಡಂ ಪಟ್ಟಣದ ಚಿಂಚೋಳಿ ಕ್ರಾಸ್ ಸಮೀಪ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತರು, ಕಳೆದ ವರ್ಷದ ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಹಾಗೂ ಸಂಬoಧಿತ ಅಧಿಕಾರಿಗಳು ತಕ್ಷಣವೇ ಬೆಳೆ ವಿಮೆ ಪರಿಹಾರದ ಹಣವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಬೆಳೆ ವಿಮೆ ಯೋಜನೆಯಡಿ ಅರ್ಹ ರೈತರಿಗೆ ಪರಿಹಾರ ಧನ ಪಾವತಿಯಾಗದೆ ಇರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಈ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು ಎಂದು ಸೇಡಂ ತಾಲೂಕು ರೈತ ಸಂಘದ ಅಧ್ಯಕ್ಷ ಶಾಂತಕುಮಾರ ಚನ್ನಕ್ಕಿ ಒತ್ತಾಯಿಸಿದರು.
ರೈತರ ನ್ಯಾಯಯುತ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸಿ ಬಾಕಿ ಇರುವ ಬೆಳೆ ವಿಮೆ ಹಣವನ್ನು ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಜಿ.ಕೆ. ಪಾಟೀಲ್ , ಆಮಶೆಟ್ಟಿ ಪಾಟೀಲ್, ರವಿ ಪಾಟೀಲ್, ದೊಡ್ಡಪ್ಪಗೌಡ ಯಡಗಾ, ಭೀಮರಾವ್ ಮಾಲಿಪಾಟೀಲ್, ಚಂದ್ರಕಾoತ ಕಲ್ಕಮ್, ಚಂದ್ರಕಾoತ ತೊಟ್ನಳ್ಳಿ, ಚಂದ್ರಕಾoತ ಗುತ್ತೇದಾರ್, ಭಾರತೀಶ್ ಕುಲಕರ್ಣಿ, ನರಸಿಂಹಲು ನಕ್ಕಾ ಸೇರಿದಂತೆ ಅನೇಕ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.



