ಜಿಲ್ಲೆಯಾದ್ಯಂತ ಖುದಿರಾಮ್ ಬೋಸ್ ಸ್ಮರಣ ದಿನ ಆಚರಣೆ
ಸ್ವಾತಂತ್ರ್ಯ ಹೋರಾಟಗಾರನ ತ್ಯಾಗ, ಹೋರಾಟವನ್ನು ಸ್ಮರಿಸಿದ ವಿದ್ಯಾರ್ಥಿ-ಯುವಕರು

ಕಲಬುರಗಿ, ಆ.11: ಜಿಲ್ಲೆಯಾದ್ಯಂತ ವಿವಿಧೆಡೆ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಖುದಿರಾಮ್ ಬೋಸ್ ಅವರ ಸ್ಮರಣ ದಿನವನ್ನು ಆಚರಿಸಲಾಯಿತು. ಮನೆಗಳು, ಹಳ್ಳಿಗಳು, ಬಡಾವಣೆಗಳು, ಉದ್ಯಾನಗಳು, ಆಟದ ಮೈದಾನಗಳು ಹಾಗೂ ಶಾಲಾ-ಕಾಲೇಜುಗಳಲ್ಲಿ ಖುದಿರಾಮ್ ಬೋಸ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರ ತ್ಯಾಗ ಮತ್ತು ಹೋರಾಟವನ್ನು ಸ್ಮರಿಸಲಾಯಿತು ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ದೇವದುರ್ಗ ತಿಳಿಸಿದ್ದಾರೆ.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅತಿ ಕಿರಿಯ ವಯಸ್ಸಿನಲ್ಲೇ ಹುತಾತ್ಮರಾದ ಖುದಿರಾಮ್ ಬೋಸ್, ತಮ್ಮ 18ನೇ ವಯಸ್ಸಿನಲ್ಲಿ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಸೆಟೆದು ನಿಂತು ಹೋರಾಡಿ ನೇಣಿಗೇರಿದರು. ಅನ್ಯಾಯ ಕಂಡಾಗ ತೀವ್ರವಾಗಿ ಪ್ರತಿರೋಧಿಸುವ ಧೈರ್ಯ ಹಾಗೂ ಅಪ್ರತಿಮ ದೇಶಪ್ರೇಮ ಹೊಂದಿದ್ದ ಅವರ ವ್ಯಕ್ತಿತ್ವ ಇಂದಿಗೂ ಯುವಜನತೆಗೆ ಸ್ಫೂರ್ತಿಯಾಗಿದೆ ಎಂದು ಅವರು ಹೇಳಿದರು.
ಖುದಿರಾಮ್ ಬೋಸ್ ನೇಣಿಗೇರುವ ಮುನ್ನ ಎದೆ ಉಬ್ಬಿಸಿ ಧೈರ್ಯದಿಂದ ಮುನ್ನಡೆದ ದೃಶ್ಯವನ್ನು ಕಂಡ ಅಂದಿನ ಬಂಗಾಳದ ಜನರು ಬೆಚ್ಚಿಬಿದ್ದಿದ್ದರು. ಅವರ ತ್ಯಾಗ ಮತ್ತು ಹೋರಾಟ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಮತ್ತಷ್ಟು ಹೊತ್ತಿಸಿತು. ಅನೇಕ ತಾಯಂದಿರು ತಮ್ಮ ಮಕ್ಕಳಿಗೂ ಖುದಿರಾಮ್ ಬೋಸ್ ಅವರಂತಹ ಧೈರ್ಯಶಾಲಿ ವ್ಯಕ್ತಿತ್ವ ಬರಲಿ ಎಂದು ಆಶಿಸಿದ್ದರು ಎಂದು ಅವರು ಸ್ಮರಿಸಿದರು.
ಚಿಕ್ಕ ವಯಸ್ಸಿನಲ್ಲೇ ಇಂತಹ ಧೀಮಂತ ವ್ಯಕ್ತಿತ್ವ ರೂಪುಗೊಳ್ಳಲು ದೇಶದ ಶೋಷಿತರು, ಬಡವರು ಮತ್ತು ರೈತ-ಕಾರ್ಮಿಕರ ಮೇಲಿನ ಅಪಾರ ಪ್ರೀತಿಯೇ ಕಾರಣ. ಆಗಸ್ಟ್ 11ರಂದು ಖುದಿರಾಮ್ ಬೋಸ್ ಹುತಾತ್ಮರಾಗಿ 118 ವರ್ಷಗಳು ಕಳೆದಿವೆ. ಆದರೆ ಇಂದಿಗೂ ಬಡವರು ಹಾಗೂ ದುಡಿಯುವ ವರ್ಗದ ಮೇಲಿನ ಶೋಷಣೆ ಸಂಪೂರ್ಣವಾಗಿ ನಿಂತಿಲ್ಲ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ಹಾಗೂ ಯುವಕರು ಖುದಿರಾಮ್ ಬೋಸ್ ಅವರ ಹೋರಾಟದ ಕಿಚ್ಚನ್ನು ತಮ್ಮಲ್ಲಿ ಬೆಳೆಸಿಕೊಳ್ಳಬೇಕು. ಶೋಷಣೆ ಮುಕ್ತ ಸಮಾಜ ನಿರ್ಮಾಣ ಮಾಡುವ ಸಂಕಲ್ಪ ಕೈಗೊಂಡಾಗ ಮಾತ್ರ ಖುದಿರಾಮ್ ಬೋಸ್ ಅವರ ಕನಸಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ವೆಂಕಟೇಶ ದೇವದುರ್ಗ ತಿಳಿಸಿದರು.



