ಬೊಗನಳ್ಳಿ ಗ್ರಾಮದಲ್ಲಿ ಹಳ್ಳದ ತಿರುವು ವಿವಾದ: ರೈತರ ಜಮೀನು ಕೊಚ್ಚಿಹೋಗುವ ಆತಂಕ,ಅಧಿಕಾರಿಗಳ ಮಧ್ಯಸ್ಥಿಕೆಗೆ ಆಗ್ರಹ

ಅಫಜಲಪುರ: ತಾಲೂಕಿನ ಬೊಗನಳ್ಳಿ ಗ್ರಾಮದಲ್ಲಿ ಮಳೆಗಾಲದಲ್ಲಿ ಭಾರೀ ಪ್ರಮಾಣದಲ್ಲಿ ಹರಿಯುವ ಹಳ್ಳದ ತಿರುವನ್ನು ಉದ್ದೇಶಪೂರ್ವಕವಾಗಿ ಬದಲಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಿಂದ ಪಕ್ಕದ ರೈತರ ಜಮೀನುಗಳು ಕೊಚ್ಚಿಹೋಗುವ ಆತಂಕ ಎದುರಾಗಿದೆ.
ಬೊಗನಳ್ಳಿ ಪತ್ರಕರ್ತರೊಂದಿಗೆ ಮಾತನಾಡಿದ ಗ್ರಾಮದ ರೈತರು, ಆರಂಭದಲ್ಲಿ ಹಳ್ಳವು ಸರ್ವೇ ನಂ. 204/3ರಲ್ಲಿ ಸಹಜವಾಗಿ ಹರಿಯುತ್ತಿತ್ತು. ಆದರೆ ಇದೀಗ ಹಳ್ಳದ ಹರಿವಿನ ಮಾರ್ಗವನ್ನು ಬದಲಾಯಿಸಿರುವುದರಿಂದ ಗ್ರಾಮದ ಸೀಮಾಂತರದಲ್ಲಿರುವ ಹಲವಾರು ರೈತರ ಕೃಷಿ ಭೂಮಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಾಗುವುದರಿಂದ ಜಮೀನು ಕೊಚ್ಚಿಹೋಗುವ ಅಪಾಯ ಹೆಚ್ಚಿದ್ದು, ರೈತರಿಗೆ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು.ಆದ್ದರಿಂದ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ತಹಸೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಹಳ್ಳದ ನೀರಿನ ಹರಿವನ್ನು ಹಿಂದಿನ ಸಹಜ ಮಾರ್ಗದಲ್ಲೇ ಸಾಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಅಧಿಕಾರಿಗಳು ಶೀಘ್ರ ಮಧ್ಯಸ್ಥಿಕೆ ವಹಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.



