ಜಿಲ್ಲಾಸುದ್ದಿ

ಲೈನ್‌ಮ್ಯಾನ್ ನಿರ್ಲಕ್ಷ್ಯಕ್ಕೆ ರೈತ ಬಲಿ? ವಿದ್ಯುತ್ ತಂತಿ ತಗುಲಿ ದುರ್ಮರಣ, ರಸ್ತೆ ತಡೆದು ಪ್ರತಿಭಟನೆ. ಪರಿಹಾರಕ್ಕೆ ಆಗ್ರಹ.

ಅಫಜಲಪುರ: ತಾಲೂಕಿನ ಅಳ್ಳಗಿ (ಕೆ) ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ರೈತನೊಬ್ಬ ಮೃತಪಟ್ಟಿರುವ ದುರ್ಘಟನೆ ಸಂಭವಿಸಿದ್ದು, ಈ ಪ್ರಕರಣದಲ್ಲಿ ಲೈನ್‌ಮ್ಯಾನ್ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ.

ಮೃತರನ್ನು ಬಸಪ್ಪ ಮಹದೇವಪ್ಪ ಪೂಜಾರಿ (42) ಎಂದು ಗುರುತಿಸಲಾಗಿದೆ. ಅವರು ರೈತರಾಗಿದ್ದು, ಪತ್ನಿ, ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಮೃತರಿಗೆ ಮೂವರು ಸಹೋದರರು ಇದ್ದಾರೆ.

ಮಾಹಿತಿಯ ಪ್ರಕಾರ, ಇಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಗ್ರಾಮದ ಲೈನ್‌ಮ್ಯಾನ್ ಗುಂಡುಜಿ ಚವ್ಹಾಣ ಅವರ ಸೂಚನೆಯ ಮೇರೆಗೆ ಬಸಪ್ಪ ಪೂಜಾರಿ ವಿದ್ಯುತ್ ಕಂಬ ಹತ್ತಿದ್ದಾರೆ ಎನ್ನಲಾಗಿದೆ. ಆದರೆ ಕಂಬ ಹತ್ತುವ ಮುನ್ನ ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತೇ? ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗಿತ್ತೇ? ಎಂಬ ಪ್ರಶ್ನೆಗಳು ಇದೀಗ ಉದ್ಭವಿಸಿವೆ.

ಕಂಬ ಹತ್ತಿದ ಕೆಲವೇ ಕ್ಷಣಗಳಲ್ಲಿ ವಿದ್ಯುತ್ ತಂತಿ ತಗುಲಿ ಬಸಪ್ಪ ಪೂಜಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ ಸ್ಥಳದಲ್ಲೇ ಇದ್ದ ಸಾರ್ವಜನಿಕರು ರೈತನನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಧಾಖಲಿಸಿದ್ದಾರೆ ಅದರೆ ಚಿಕಿತ್ಸೆ ಫಲಿಸದೇ ರೈತ ಬಸಪ್ಪ ಪೂಜಾರಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ಗ್ರಾಮದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಲೈನ್‌ಮ್ಯಾನ್ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪವೆ ರೈತನ ಸಾವಿಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ವಿದ್ಯುತ್ ಇಲಾಖೆಯ ಸಿಬ್ಬಂದಿ ಯಾವುದೇ ವ್ಯಕ್ತಿಯನ್ನು ವಿದ್ಯುತ್ ಕಂಬ ಹತ್ತಿಸುವ ಮುನ್ನ ವಿದ್ಯುತ್ ಸರಬರಾಜು ಸಂಪೂರ್ಣ ಸ್ಥಗಿತಗೊಳಿಸಿ, ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆದರೆ ಈ ಪ್ರಕರಣದಲ್ಲಿ ಆ ನಿಯಮಗಳು ಪಾಲನೆಯಾಗಿಲ್ಲ ಎಂಬ ಅನುಮಾನ ವ್ಯಕ್ತವಾಗಿದೆ.

ಘಟನೆಯ ಕುರಿತು ಪೊಲೀಸರು ಹಾಗೂ ವಿದ್ಯುತ್ ಇಲಾಖೆಯ ಹಿರಿಯ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ, ಲೈನ್‌ಮ್ಯಾನ್ ಅಥವಾ ಇತರ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿರುವುದು ಸಾಬೀತಾದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ, ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ಹಾಗೂ ನ್ಯಾಯ ದೊರಕಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button