ಜಿಲ್ಲಾಸುದ್ದಿ

ಎಸ್‌ಐಆರ್ ಕಾರ್ಯಕ್ಕೆ ವೇಗ: ಶೇ.100ರಷ್ಟು ಗಣತಿ ನಮೂನೆ ವಿತರಣೆ ಪೂರ್ಣಗೊಳಿಸಿ – ವಿ. ಅನ್ಬುಕುಮಾರ್

ಇನ್ನೆರಡು ದಿನಗಳಲ್ಲಿ ಬಾಕಿ ನಮೂನೆ ವಿತರಣೆ ಪೂರ್ಣಗೊಳಿಸಲು ಸೂಚನೆ; ಜುಲೈ 29ರೊಳಗೆ ಡಿಜಿಟೈಸೇಷನ್ ಕಾರ್ಯಕ್ಕೆ ವೇಗ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ

ಕಲಬುರಗಿ: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಬಿ.ಎಲ್.ಓ.ಗಳು ತಮ್ಮ ಬಳಿ ಒಂದೇ ಒಂದು ಗಣತಿ ನಮೂನೆಯನ್ನೂ ಉಳಿಸಿಕೊಳ್ಳದೆ ಶೇ.100ರಷ್ಟು ನಮೂನೆಗಳನ್ನು ಮತದಾರರಿಗೆ ವಿತರಿಸಬೇಕು ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಎಸ್‌ಐಆರ್ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಶೇ.97.64ರಷ್ಟು ಗಣತಿ ನಮೂನೆಗಳು ವಿತರಣೆಗೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ ಇನ್ನೂ 56,021 ಗಣತಿ ನಮೂನೆಗಳ ವಿತರಣೆ ಬಾಕಿ ಇರುವುದನ್ನು ಉಲ್ಲೇಖಿಸಿ, ಮುಂದಿನ ಎರಡು ದಿನಗಳೊಳಗೆ ಶೇ.100ರಷ್ಟು ವಿತರಣೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮತದಾರರಿಂದ ಭರ್ತಿ ಮಾಡಿದ ನಮೂನೆಗಳನ್ನು ತಂತ್ರಾಂಶದಲ್ಲಿ ದಾಖಲಿಸುವ ಕಾರ್ಯವೂ ಅಷ್ಟೇ ಮಹತ್ವದ್ದಾಗಿದೆ ಎಂದು ಹೇಳಿದ ಅವರು, ಜುಲೈ 29 ಡಿಜಿಟೈಸೇಷನ್‌ಗೆ ಕೊನೆಯ ದಿನವಾಗಿರುವುದರಿಂದ ಕೊನೆಯ ಕ್ಷಣದವರೆಗೆ ಕಾಯದೆ ತಕ್ಷಣವೇ ವೇಗ ಹೆಚ್ಚಿಸಬೇಕು ಎಂದು ತಿಳಿಸಿದರು.

ಜಿಲ್ಲೆಯ 2,400 ಬಿ.ಎಲ್.ಓ.ಗಳ ಪೈಕಿ 435 ಮಂದಿ ಇನ್ನೂ ಶೇ.10ಕ್ಕಿಂತ ಕಡಿಮೆ ಡಿಜಿಟೈಸೇಷನ್ ಪ್ರಗತಿ ಸಾಧಿಸಿರುವುದನ್ನು ಉಲ್ಲೇಖಿಸಿದ ಅವರು, ವಿಶೇಷವಾಗಿ ಕಲಬುರಗಿ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಬಿ.ಎಲ್.ಓ.ಗಳು ಕಾರ್ಯಕ್ಷಮತೆ ಹೆಚ್ಚಿಸಬೇಕು ಎಂದು ಸೂಚಿಸಿದರು. ನಿಗದಿತ ಅವಧಿಯ ಬಳಿಕ ಯಾವುದೇ ಅರ್ಜಿಯನ್ನು ತಂತ್ರಾಂಶದಲ್ಲಿ ಸ್ವೀಕರಿಸಲಾಗುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ಬಿ.ಎಲ್.ಓ.ಗಳಿಗೆ ₹8,000 ಗೌರವಧನ ನೀಡಲು ಈಗಾಗಲೇ ಸರ್ಕಾರ ಆದೇಶ ಹೊರಡಿಸಿದ್ದು, ಆಯಾ ತಾಲೂಕಿನ ತಹಶೀಲ್ದಾರರು ತಕ್ಷಣವೇ ಅನುದಾನ ಬಿಡುಗಡೆ ಮಾಡಿ ಸಿಬ್ಬಂದಿಯನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ರಾಜಕೀಯ ಪಕ್ಷಗಳಿಗೆ ನಿಯಮಿತ ಮಾಹಿತಿ ನೀಡುವಂತೆ ಸೂಚನೆ

ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮತದಾರರ ನೋಂದಣಾಧಿಕಾರಿಗಳು ವಾರಕ್ಕೊಮ್ಮೆ ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಿ ಎಸ್‌ಐಆರ್ ಪ್ರಗತಿಯ ಮಾಹಿತಿಯನ್ನು ಹಂಚಿಕೊಳ್ಳಬೇಕು. ಜೊತೆಗೆ ಪ್ರತಿದಿನ ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ಬಿಡುಗಡೆ ಮಾಡುವ ಮೂಲಕ ಯಾವುದೇ ಗೊಂದಲ ಅಥವಾ ದೂರುಗಳಿಗೆ ಅವಕಾಶ ನೀಡಬಾರದು ಎಂದು ವಿ. ಅನ್ಬುಕುಮಾರ್ ನಿರ್ದೇಶಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಇಕ್ರಮ್ ಶರೀಫ್ ಮಾತನಾಡಿ, ಜಿಲ್ಲೆಯ 23,71,542 ಮತದಾರರ ಪೈಕಿ 23,15,521 (ಶೇ.97.64) ಮಂದಿಗೆ ಗಣತಿ ನಮೂನೆ ವಿತರಿಸಲಾಗಿದೆ ಎಂದು ತಿಳಿಸಿದರು. ಇದುವರೆಗೆ 5,48,736 ಅರ್ಜಿಗಳನ್ನು ಡಿಜಿಟೈಸೇಷನ್ ಮಾಡಲಾಗಿದ್ದು, ಶೇ.23.14ರಷ್ಟು ಪ್ರಗತಿ ಸಾಧಿಸಲಾಗಿದೆ. ಮುಂದಿನ ಹತ್ತು ದಿನಗಳಲ್ಲಿ ಡಿಜಿಟೈಸೇಷನ್ ಕಾರ್ಯಕ್ಕೆ ಮತ್ತಷ್ಟು ವೇಗ ನೀಡಿ ಕಾಲಮಿತಿಯೊಳಗೆ ಶೇ.100ರಷ್ಟು ಗುರಿ ಸಾಧಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಸಂಕನೂರ್, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತರಾದ ಸಾಹಿತ್ಯ ಆಲದಕಟ್ಟಿ, ಪ್ರಭುರೆಡ್ಡಿ, ಪ್ರೊಬೇಷನರ್ ಐಎಎಸ್ ಅಧಿಕಾರಿ ಶಿಖರ ಮೋಘಾ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಮತದಾರರ ನೋಂದಣಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button