ಜಿಲ್ಲಾಸುದ್ದಿ

ಹಾವು ಕಡಿತದಿಂದ ಆತಂಕ ಬೇಡ, ಎಚ್ಚರಿಕೆ ಇರಲಿ: ರಮೇಶ್

ನಾಟಿ ಚಿಕಿತ್ಸೆ ಬದಲು ತಕ್ಷಣ ಸರ್ಕಾರಿ ಆಸ್ಪತ್ರೆಗೆ ತೆರಳಿ ಉಚಿತ ಚಿಕಿತ್ಸೆ ಪಡೆಯಲು ಸಲಹೆ

ಚಿತ್ತಾಪುರ, ಸೆ. 9: ಹಾವು ಕಡಿತದಿಂದ ಆತಂಕ ಪಡುವ ಅಗತ್ಯವಿಲ್ಲ. ಆದರೆ ಹಾವುಗಳ ಬಗ್ಗೆ ಎಚ್ಚರಿಕೆ ಹಾಗೂ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಮರತೂರ್ ಗ್ರಾಮದ ಆಯುಷ್ಮಾನ್ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ರಮೇಶ್ ಜಿ.ಆರ್. ಹೇಳಿದರು.

ಮರತೂರ್ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ನಡೆದ ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಹಾವು ಕಡಿತಕ್ಕೊಳಗಾದವರನ್ನು ಯಾವುದೇ ವಿಳಂಬ ಮಾಡದೆ ಆಂಬ್ಯುಲೆನ್ಸ್ ಅಥವಾ ಇತರ ವಾಹನದ ಮೂಲಕ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಬೇಕು. ಅಲ್ಲಿ ಉಚಿತ ಚಿಕಿತ್ಸೆ ದೊರೆಯುತ್ತದೆ. ಹಾವು ಕಚ್ಚಿದ ವ್ಯಕ್ತಿಯನ್ನು ಆತಂಕಕ್ಕೊಳಗಾಗದಂತೆ ಸಮಾಧಾನಪಡಿಸಬೇಕು. ಕಚ್ಚಿದ ಭಾಗಕ್ಕೆ ಕಟ್ಟು ಹಾಕುವುದು, ಕತ್ತರಿಸುವುದು ಸೇರಿದಂತೆ ಯಾವುದೇ ಪ್ರಯೋಗಗಳನ್ನು ಮಾಡಬಾರದು. ನಾಟಿ ವೈದ್ಯರ ಬಳಿ ಚಿಕಿತ್ಸೆ ಪಡೆಯುವುದರಿಂದ ಸಮಯ ವ್ಯರ್ಥವಾಗುವ ಸಾಧ್ಯತೆ ಇರುವುದರಿಂದ ಅಂತಹ ಅಸುರಕ್ಷಿತ ಚಿಕಿತ್ಸಾ ಪದ್ಧತಿಗಳನ್ನು ಅನುಸರಿಸಬಾರದು ಎಂದು ಸಲಹೆ ನೀಡಿದರು.

ಆರೋಗ್ಯ ನಿರೀಕ್ಷಣಾಧಿಕಾರಿ ಸಿದ್ದಣ್ಣ ವಡಗೇರಿ ಮಾತನಾಡಿ, ಗಿಡಗಂಟಿಗಳು ಹೆಚ್ಚಿರುವ ಪ್ರದೇಶಗಳು, ಕತ್ತಲೆಯಲ್ಲಿ ಓಡಾಡುವ ಸ್ಥಳಗಳು ಹಾಗೂ ಹೊಲ-ಗದ್ದೆ ಮತ್ತು ಮನೆಗಳ ಸುತ್ತಮುತ್ತ ಕಸದ ರಾಶಿ ಇರುವ ಕಡೆ ಹಾವುಗಳ ಸಂಚಾರ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಇಂತಹ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.

ಮನೆಗಳ ಸುತ್ತಮುತ್ತ ಕಸ ಹಾಕದಿರುವುದು, ಹೊಲ-ಗದ್ದೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ರಾತ್ರಿ ಮಲಗುವಾಗ ಸೊಳ್ಳೆ ಪರದೆ ಬಳಸುವುದು ಹಾಗೂ ಓಡಾಡುವ ದಾರಿಗಳನ್ನು ಸ್ವಚ್ಛವಾಗಿಡುವುದರಿಂದ ಹಾವು ಕಡಿತದ ಅಪಾಯವನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದರು.

ಮರತೂರ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭಗವಂತರಾಯ ಮಯೂರ್, ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ಜಯಶ್ರೀ ಮಾಲಗತ್ತಿ ಇದ್ದರು. ಇದೇ ಸಂದರ್ಭದಲ್ಲಿ ‘ಹಾವು ಕಡಿತದಿಂದ ತಪ್ಪಿಸಿಕೊಳ್ಳುವುದು ಹೇಗೆ?’ ಎಂಬ ಬಿತ್ತಿಪತ್ರ ಬಿಡುಗಡೆ ಮಾಡಲಾಯಿತು.

Related Articles

Leave a Reply

Your email address will not be published. Required fields are marked *

Back to top button