ಶಿಕ್ಷಣ

“ಮಕ್ಕಳ ಕೈಯಲ್ಲಿ ಪುಸ್ತಕವಿರಲಿ, ಕೆಲಸದ ಆಯುಧಗಳಲ್ಲ”: ಸಂತೋಷ್ ಪಾಟೀಲ್

ಕಲಬುರಗಿಯಲ್ಲಿ ವಿಭಾಗೀಯ ಮಟ್ಟದ ನಾಲ್ಕು ದಿನಗಳ ಬಾಲಬಾಂಧವ್ಯ ಕಾರ್ಯಾಗಾರಕ್ಕೆ ಚಾಲನೆ; ಬಾಲಕಾರ್ಮಿಕ, ಬಾಲ್ಯವಿವಾಹ ನಿರ್ಮೂಲನೆಗೆ ಜಾಗೃತಿ ಕರೆ

ಕಲಬುರಗಿ, ಜು.14: ಮಕ್ಕಳ ಕೈಯಲ್ಲಿ ಪುಸ್ತಕವಿರಬೇಕು, ಕೆಲಸದ ಆಯುಧಗಳಲ್ಲ. ಮಕ್ಕಳ ಹಕ್ಕುಗಳ ರಕ್ಷಣೆ, ಬಾಲಕಾರ್ಮಿಕ ಹಾಗೂ ಬಾಲ್ಯವಿವಾಹ ಮುಕ್ತ ಕರ್ನಾಟಕ ನಿರ್ಮಾಣವು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಸಂತೋಷ್ ಪಾಟೀಲ್ ಹೇಳಿದರು.

ನಗರದ ಕೇಸರಟಗಿಯಲ್ಲಿರುವ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಂಸ್ಥೆ (ANSSIRD) ಪ್ರಾದೇಶಿಕ ಕೇಂದ್ರದಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ 12ರಿಂದ 18 ವರ್ಷದ ಮಕ್ಕಳಿಗಾಗಿ ಆಯೋಜಿಸಿದ್ದ ವಿಭಾಗೀಯ ಮಟ್ಟದ ನಾಲ್ಕು ದಿನಗಳ ಬಾಲಬಾಂಧವ್ಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಂದು ಮಗುವಿಗೂ ಬದುಕುವ ಹಕ್ಕು, ಶಿಕ್ಷಣದ ಹಕ್ಕು, ಅಭಿವೃದ್ಧಿಯ ಹಕ್ಕು ಹಾಗೂ ಪಾಲ್ಗೊಳ್ಳುವಿಕೆಯ ಹಕ್ಕು ಎಂಬ ನಾಲ್ಕು ಮೂಲಭೂತ ಹಕ್ಕುಗಳಿದ್ದು, ಅವುಗಳ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು. ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ ಹಾಗೂ ಭಿಕ್ಷಾಟನೆ ಮೊದಲಾದ ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಜಾಗೃತಿ ಅತ್ಯಗತ್ಯ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ ಮಾತನಾಡಿ, ಮಕ್ಕಳ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಯೇ ದೇಶದ ಭವಿಷ್ಯವನ್ನು ರೂಪಿಸುತ್ತದೆ. ಪೋಷಕರು, ಸಮಾಜ ಹಾಗೂ ಸರ್ಕಾರ ಎಲ್ಲರೂ ಮಕ್ಕಳ ಹಕ್ಕುಗಳನ್ನು ಗೌರವಿಸಿ ಅವರ ಸಮಗ್ರ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಸಂಕನೂರು ಮಾತನಾಡಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳೂ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾಗಿವೆ. ಕಲೆ, ನಾಟಕ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಕ್ಕಳ ಪ್ರತಿಭೆಯನ್ನು ಬೆಳೆಸಲು ಈ ಶಿಬಿರ ಸಹಕಾರಿಯಾಗಲಿದೆ ಎಂದರು. ಇಂದಿನ ತಂತ್ರಜ್ಞಾನ ಯುಗದಲ್ಲಿ ಕೃತಕ ಬುದ್ಧಿಮತ್ತೆ (AI) ಸೇರಿದಂತೆ ಹೊಸ ತಂತ್ರಜ್ಞಾನಗಳನ್ನು ಕಲಿಯುವುದರ ಜೊತೆಗೆ ಸೃಜನಶೀಲತೆಯನ್ನೂ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಬಾಲಭವನ ಸೊಸೈಟಿಯ ಉಪಾಧ್ಯಕ್ಷ ಅನಿಲಕುಮಾರ ಜಮಾದಾರ್ ಮಾತನಾಡಿ, ಮಕ್ಕಳಿಗೆ ಮೊಬೈಲ್ ಬಳಕೆಯ ಮಿತಿ ಹಾಗೂ ಜವಾಬ್ದಾರಿಯನ್ನು ತಿಳಿಸುವುದು ಅಗತ್ಯವಾಗಿದೆ. ಕೇವಲ ಅಂಕಗಳಿಗೆ ಸೀಮಿತವಾಗದೆ ಸಂಸ್ಕಾರ ಮತ್ತು ಜೀವನ ಮೌಲ್ಯಗಳನ್ನು ಬೆಳೆಸುವ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.

ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ವಿಶ್ವಾರಾಧ್ಯ ಕೆ. ಇಜೇರಿ, ಜಿಲ್ಲಾ ಮಟ್ಟದ ಬಾಲ ವಿಕಾಸ ಅಕಾಡೆಮಿ ಅನುಷ್ಠಾನ ಸಮಿತಿಯ ಸದಸ್ಯ ಎ.ಕೆ. ರಾಮೇಶ್ವರ ಸೇರಿದಂತೆ ಹಲವು ಗಣ್ಯರು ಮಕ್ಕಳ ಸರ್ವತೋಮುಖ ಬೆಳವಣಿಗೆ, ಮೌಲ್ಯಾಧಾರಿತ ಶಿಕ್ಷಣ ಹಾಗೂ ಸಾಮಾಜಿಕ ಜವಾಬ್ದಾರಿಯ ಕುರಿತು ಅಭಿಪ್ರಾಯ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳ ಮಕ್ಕಳಿಗೆ ನಾಟಕ, ಸಾಂಸ್ಕೃತಿಕ ಚಟುವಟಿಕೆಗಳು, ದೇಸಿ ಆಟಗಳು ಹಾಗೂ ಸಂವಾದಗಳ ಮೂಲಕ ನಾಯಕತ್ವ, ಆತ್ಮವಿಶ್ವಾಸ ಮತ್ತು ಸಾಮಾಜಿಕ ಅರಿವು ಬೆಳೆಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೀದರ, ಯಾದಗಿರಿ, ರಾಯಚೂರು, ಬಳ್ಳಾರಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ ಮಕ್ಕಳು, ಪೋಷಕರು ಹಾಗೂ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button