ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ಅನಿರೀಕ್ಷಿತ ದಾಳಿ!ಬ್ಯಾರಕ್ನಲ್ಲಿ ಸಿಕ್ಕಿತು ಮೊಬೈಲ್ 128 ಪೊಲೀಸರಿಂದ ತಪಾಸಣೆ

ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರು ಅನಿರೀಕ್ಷಿತ ದಾಳಿ ನಡೆಸಿ, ನಿಷೇಧಿತ ವಸ್ತುವಾಗಿರುವ ಒಂದು ಮೊಬೈಲ್ ಫೋನ್ನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್.ಡಿ., ಐಪಿಎಸ್ ಅವರ ನಿರ್ದೇಶನದ ಮೇರೆಗೆ, ಸೆಪ್ಟೆಂಬರ್ 9ರಂದು ಬೆಳಿಗ್ಗೆ 5ರಿಂದ 7 ಗಂಟೆಯವರೆಗೆ ಈ ಕಾರ್ಯಾಚರಣೆ ನಡೆಯಿತು.
ಉಪ ಪೊಲೀಸ್ ಆಯುಕ್ತರಾದ ಶಾಲೂ, ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ಉಪ ಪೊಲೀಸ್ ಆಯುಕ್ತರಾದ ಪ್ರವೀಣ್ ಹೆಚ್. ನಾಯಕ್, ಕೆಎಸ್ಪಿಎಸ್ ಅವರ ನೇತೃತ್ವದಲ್ಲಿ ಒಟ್ಟು 128 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರಾಗೃಹದ ವಿವಿಧ ಬ್ಯಾರಕ್ಗಳು ಮತ್ತು ಕೈದಿಗಳ ಕೋಣೆಗಳನ್ನು ತಪಾಸಣೆ ನಡೆಸಿದರು.
ಈ ವೇಳೆ ಬ್ಯಾರಕ್ ನಂ. 06ರ ಅಮರ್ಜಾದಲ್ಲಿ ಹೀರೋ ಕಂಪನಿಯ ಒಂದು ಕೀಪ್ಯಾಡ್ ಮೊಬೈಲ್ ಪತ್ತೆಯಾಗಿದೆ. ಪತ್ತೆಯಾದ ಮೊಬೈಲ್ನಲ್ಲಿ ಯಾವುದೇ ಸಿಮ್ ಕಾರ್ಡ್ ಇರಲಿಲ್ಲ.
ಕಾರಾಗೃಹದಲ್ಲಿ ನಿಷೇಧಿತ ವಸ್ತು ಪತ್ತೆಯಾದ ಹಿನ್ನೆಲೆಯಲ್ಲಿ, ಮುಖ್ಯ ಅಧೀಕ್ಷಕರಾದ ಶ್ರೀ ಕೃಷ್ಣಕುಮಾರ ಅವರು ನೀಡಿದ ದೂರಿನ ಆಧಾರದ ಮೇಲೆ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 95/2026 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಬಿಎನ್ಎಸ್-2023ರ ಕಲಂ 323 ಹಾಗೂ ಕರ್ನಾಟಕ ಕಾರಾಗೃಹ (ತಿದ್ದುಪಡಿ) ಅಧಿನಿಯಮ-2022ರ ಕಲಂ 42ರ ಅನ್ವಯ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.



