ಸಾಹಿತ್ಯದ ಮೂಲಕ ವಿದ್ಯಾರ್ಥಿಗಳು ವ್ಯಕ್ತಿತ್ವ ರೂಪಿಸಿಕೊಳ್ಳಲಿ: ಡಾ. ದಾಕ್ಷಾಯಿಣಿ ಎಸ್. ಅಪ್ಪ
ಅಂತರ್ ಕಾಲೇಜು ಸಂಸ್ಕೃತಿ ಪುನಶ್ಚೇತನ ಶಿಬಿರದ ಸ್ಪರ್ಧೆಗಳಲ್ಲಿ 30 ಕಾಲೇಜುಗಳ ವಿದ್ಯಾರ್ಥಿಗಳ ಭಾಗಿ

ಕಲಬುರಗಿ, ನ.17: ವಿದ್ಯಾರ್ಥಿಗಳು ಕನ್ನಡ ಸಾಹಿತ್ಯದ ಮೂಲಕ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ವಚನ ಸಾಹಿತ್ಯ, ತತ್ವಪದ ಸಾಹಿತ್ಯ, ದಾಸ ಸಾಹಿತ್ಯ ಹಾಗೂ ಆಧುನಿಕ ಸಾಹಿತ್ಯವನ್ನು ವಿಶಾಲ ದೃಷ್ಟಿಕೋನದಿಂದ ಅಧ್ಯಯನ ಮಾಡುವ ಅಗತ್ಯವಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಡಾ. ದಾಕ್ಷಾಯಿಣಿ ಎಸ್. ಅಪ್ಪ ಹೇಳಿದರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಪದವಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಬೆಂಗಳೂರು ಹಾಗೂ ಗೋದುತಾಯಿ ದೊಡ್ಡಪ್ಪ ಅಪ್ಪ ಮಹಿಳಾ ಮಹಾವಿದ್ಯಾಲಯ, ಕಲಬುರಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಅಂತರ್ ಕಾಲೇಜು ಸಂಸ್ಕೃತಿ ಪುನಶ್ಚೇತನ ಶಿಬಿರದ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರ “ಇವನಾರವ, ಇವನಾರವ ಎಂದೆನಿಸಯ್ಯಾ, ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯಾ” ಎಂಬ ವಚನ, ಕನಕದಾಸರ “ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯೇನಾದರೂ ಬಲ್ಲಿರೇ” ಎಂಬ ಸಂದೇಶ ಹಾಗೂ ಕುವೆಂಪು ಅವರ “ಕೋಗಿಲೆಗಾವ ಕುಲವಿದೆ ಹೇಳಿ” ಎಂಬ ನುಡಿಗಳು ವಿಶ್ವಮಾನವ ಸಂದೇಶ ಸಾರುತ್ತವೆ ಎಂದು ಹೇಳಿದರು.
ಇಂತಹ ಸಾಹಿತ್ಯದ ಅಧ್ಯಯನದಿಂದ ನಮ್ಮೊಳಗಿನ ಕೀಳರಿಮೆಯನ್ನು ತೊಡೆದುಹಾಕಿ ಉನ್ನತ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ಸಾಹಿತ್ಯವು ಕಾಯಕ ಮತ್ತು ದಾಸೋಹದ ಮೌಲ್ಯಗಳನ್ನು ಸಾರುತ್ತದೆ. ಆದ್ದರಿಂದ ಕಾಲೇಜು ವಿದ್ಯಾರ್ಥಿಗಳಲ್ಲಿ ಇಂತಹ ಮನೋಭಾವ ಬೆಳೆಸಲು ಸಂಸ್ಕೃತಿ ಹಾಗೂ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಅಗತ್ಯವಾಗಿವೆ ಎಂದರು.
ಪ್ರತಿಯೊಬ್ಬರೂ ಕಾಯಕದಲ್ಲಿ ತೊಡಗಬೇಕು. ಮಾಡುವ ಕೆಲಸದಲ್ಲಿ ಸ್ವಾರ್ಥ ಇರಬಾರದು. ಮಹಾಕವಿ ಕನಕದಾಸರ ಚರಿತ್ರೆಯನ್ನು ಓದಿದಾಗ ಅವರು ಕಾಯಕದಲ್ಲಿ ನಿರತರಾಗಿದ್ದದ್ದು ಮತ್ತು ಗಳಿಸಿದ ಸಂಪತ್ತನ್ನು ಅರ್ಹರಿಗೆ ಸಲ್ಲಿಸಿದದ್ದು ತಿಳಿದುಬರುತ್ತದೆ. ಇಂತಹ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ-ಕಾಲೇಜುಗಳ ನಿರ್ದೇಶಕಿ ಡಾ. ನೀಲಾಂಬಿಕಾ ಶೇರಿಕಾರ, ಡಾ. ಪುಟ್ಟಮಣಿ ದೇವಿದಾಸ, ಡಾ. ಸಿದ್ಧಲಿಂಗರೆಡ್ಡಿ, ಡಾ. ಪ್ರತಿಭಾ ಪಾಟೀಲ ಹಾಗೂ ಕನಕ ಅಧ್ಯಯನ ಕೇಂದ್ರದ ಸತ್ಯನಾರಾಯಣ ಉಪಸ್ಥಿತರಿದ್ದರು.
ಡಾ. ರೋಳೇಕರ ನಾರಾಯಣ ಸ್ವಾಗತಿಸಿದರು. ಡಾ. ಮೀನಾಕ್ಷಿ ಬಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶಾಂತಲಿಂಗ ಗಂಟೆ ನಿರೂಪಿಸಿದರು. ಡಾ. ಸುರೇಶ ಜಾಧವ ವಂದಿಸಿದರು.
ನಂತರ ನಡೆದ ಸ್ಪರ್ಧೆಗಳಲ್ಲಿ ಸುಮಾರು 30 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿ ಭಾಷಣ, ಪ್ರಬಂಧ ಹಾಗೂ ಓದು-ವ್ಯಾಖ್ಯಾನ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.



