ಜಿಲ್ಲಾಸುದ್ದಿ

13.42 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಪ್ರಭು ಚವಾಣ್ ಚಾಲನೆ

ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ರಸ್ತೆ, ಸೇತುವೆ ಹಾಗೂ ಸಮುದಾಯ ಭವನ ಕಾಮಗಾರಿಗಳ ಪರಿಶೀಲನೆ; ಗುಣಮಟ್ಟದ ಕಾಮಗಾರಿಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ

ಔರಾದ್, ಆ.4: ಶಾಸಕ ಹಾಗೂ ಮಾಜಿ ಸಚಿವ ಪ್ರಭು ಬಿ. ಚವಾಣ್ ಅವರು ಮಂಗಳವಾರ ಔರಾದ್ (ಬಿ) ಹಾಗೂ ಕಮಲನಗರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಒಟ್ಟು 13.42 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.

ಹಂಗರಗಾ ಹಾಗೂ ಸಾವರಗಾಂವ ಗ್ರಾಮಗಳಲ್ಲಿ 6.49 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ, ಠಾಣಾ ಕುಶನೂರ ಗ್ರಾಮದಲ್ಲಿ 30 ಲಕ್ಷ ರೂ. ವೆಚ್ಚದ ಸಮುದಾಯ ಭವನ ನಿರ್ಮಾಣ, ಬಳತ (ಬಿ) ಗ್ರಾಮದಲ್ಲಿ 5 ಕೋಟಿ ರೂ. ವೆಚ್ಚದ ಸೇತುವೆ ನಿರ್ಮಾಣ, ಹೊರಂಡಿ ಗ್ರಾಮದಲ್ಲಿ 13 ಲಕ್ಷ ರೂ. ವೆಚ್ಚದ ಸಮುದಾಯ ಭವನ ನಿರ್ಮಾಣ ಹಾಗೂ ಡೋಣಗಾಂವ (ಎಂ)ದಿಂದ ಮುಕರವರೆಗೆ 1.50 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಇದೇ ವೇಳೆ ವಿವಿಧ ಗ್ರಾಮಗಳಲ್ಲಿ ಈಗಾಗಲೇ ಪ್ರಗತಿಯಲ್ಲಿರುವ ರಸ್ತೆ, ಸೇತುವೆ ಹಾಗೂ ಸಮುದಾಯ ಭವನ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಮಗಾರಿಗಳ ಪ್ರಗತಿ, ಗುಣಮಟ್ಟ ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಕಾಮಗಾರಿಗಳನ್ನು ಇನ್ನಷ್ಟು ವೇಗವಾಗಿ ಹಾಗೂ ಗುಣಮಟ್ಟದಿಂದ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪ್ರಭು ಚವಾಣ್, ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ತಮ್ಮ ಪ್ರಮುಖ ಗುರಿಯಾಗಿದ್ದು, ಇದೇ ಉದ್ದೇಶದಿಂದ ನಿರಂತರ ಗ್ರಾಮ ಸಂಚಾರ ನಡೆಸಲಾಗುತ್ತಿದೆ ಎಂದು ಹೇಳಿದರು. ಸಾರ್ವಜನಿಕರ ಬೇಡಿಕೆಗಳು ಹಾಗೂ ಸ್ಥಳೀಯ ಅಗತ್ಯತೆಗಳನ್ನು ಪರಿಗಣಿಸಿ ಗ್ರಾಮೀಣ ರಸ್ತೆ, ಸೇತುವೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರದ ಅನುದಾನದಲ್ಲಿ ಕೈಗೆತ್ತಿಕೊಳ್ಳುವ ಪ್ರತಿಯೊಂದು ಕಾಮಗಾರಿಯೂ ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಬೇಕು. ಅಧಿಕಾರಿಗಳು ಕಾಮಗಾರಿಗಳ ಮೇಲ್ವಿಚಾರಣೆಯನ್ನು ನಿರಂತರವಾಗಿ ನಡೆಸಬೇಕು. ಗುತ್ತಿಗೆದಾರರು ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿ ನಡೆಸಬಾರದು. ಗುಣಮಟ್ಟದಲ್ಲಿ ರಾಜಿ ಕಂಡುಬಂದರೆ ಅಥವಾ ಕಾಮಗಾರಿ ವಿಳಂಬವಾದರೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಕಾರ್ಯಕ್ರಮದಲ್ಲಿ ಠಾಣಾ ಕುಶನೂರ ಮಠದ ಸಿದ್ಧಲಿಂಗ ಮಹಾಸ್ವಾಮೀಜಿ, ಧೊಂಡಿಬಾ ನರೋಟೆ, ಶಿವಾಜೀರಾವ್ ಪಾಟೀಲ್ ಮುಂಗನಾಳ, ರಾಮಶೆಟ್ಟಿ ಪನ್ನಾಳೆ, ಬಸವರಾಜ್ ಪಾಟೀಲ್, ಕಾಶೀನಾಥ ಜಿಗರೆ, ಶಿವರಾಜ್ ಮದಕಟ್ಟೆ, ಬಸವರಾಜ್ ಕೆಂಪಶೆಟ್ಟಿ, ಮನ್ಮಥರಾವ್ ಜಿಗರೆ, ಶಿವಕುಮಾರ್ ಸಜ್ಜನಶೆಟ್ಟಿ, ಸೂರ್ಯಕಾಂತ ಅಲ್ಮಾಜೆ, ಗಿರೀಶ್ ಒಡೆಯರ್, ಶಿವರಾಜ್ ಬೋಚ್ರೆ, ಮಾಣಿಕರಾವ್ ಬಾಬಚೇಡೆ, ಓಂಕಾರ ಸ್ವಾಮಿ, ಸಚಿನ್ ರಾಠೋಡ್, ಉದಯ ಸೋಲಾಪೂರೆ, ಮಂಜು ಸ್ವಾಮಿ, ಶಾಲಿವಾಹನ ಬಿರಾದಾರ, ಸಂತೋಷ್ ಬಿರಾದಾರ, ರಮಾಕಾಂತ ಕೊಂಡೆ, ಬಂಟಿ ರಾಂಪೂರೆ ಸೇರಿದಂತೆ ಬಿಜೆಪಿ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button